ಶ್ರೀರಂಗಪಟ್ಟಣ ತಾಲೂಕು ಕಚೇರಿ ಎದುರು ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇಗೌಡ, ಮಹಾಲಿಂಗು, ಎಂ.ವಿ.ಕೃಷ್ಣ, ಮಹದೇವು, ಮಹೇಶ್ ಇದ್ದರು. 
ಮಂಡ್ಯ

ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿಗೆ ಒತ್ತಾಯ

ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರ ಪ್ರತಿಭಟನೆ

ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರದೆ ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿಪಡಿಸಬೇಕು ಹಾಗೂ ಭತ್ತ ಬೆಳೆದ ರೈತರ ಹಿತಕಾಯಬೇಕು ಎಂದು ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲ ಕಾಲ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಬ್ಬು ಬೆಳೆಗೆ ದರ ನಿಗದಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹೊಣೆ ಹೊರದೆ ಪರಸ್ಪರ ಕೆಸರೆರೆಚಾಟ ಮಾಡಿಕೊಂಡು ನುಣುಚಿಕೊಳ್ಳುತ್ತಿದೆ. ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾದರೂ ಬೆಳೆಗಳಿಗೆ ಉತ್ತಮ ದರ ನಿಗದಿಯಾಗುತ್ತಿಲ್ಲ. ಪ್ರಸ್ತುತ ಕಬ್ಬು ಬೆಳೆಗಾರರ ಹೋರಾಟದಿಂದ ರಾಜ್ಯ ಸರ್ಕಾರ ಬೆಳಗಾವಿ ಭಾಗದ ರೈತರ ಹೋರಾಟ ತಗ್ಗಿಸುವ ಸಲುವಾಗಿ ಅಲ್ಲಿಯ ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಆ ಭಾಗದಲ್ಲಿ ಮಾತ್ರ ಕಾರ್ಖಾನೆ ಮಾಲೀಕರು ಕಡುಗೂಲಿ ಹಾಗೂ ಒಡಗೂಲಿ ಕಳೆದು ಪ್ರತಿ ಟನ್ ಕಬ್ಬಿಗೆ 3600 ರೂ.ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಮಂಡ್ಯ ಸೇರಿದಂತೆ ದಕ್ಷಿಣ ಭಾಗದ ಕಬ್ಬು ಬೆಳೆಗಾರ ರೈತರಿಗೆ ಇದು ಅನ್ವಯ ಆಗದೆ ಕಾರ್ಖಾನೆ ಮಾಲೀಕರು ಎಲ್ಲ ವೆಚ್ಚ ಸೇರಿ ಕೇವಲ 3300 ರೂ.ನೀಡುತ್ತಿದ್ದಾರೆ.

ಈ ಭಾಗದ ರೈತರಿಗೂ ದರ ನಿಗದಿ ವಿಚಾರದಲ್ಲಿ ಸಮಾನ ನ್ಯಾಯ ದೊರಕದಿದ್ದಲ್ಲಿ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಮಹಾಲಿಂಗು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ದರಸಗುಪ್ಪೆ ಮಹೇಶ್, ನಾಗಣ್ಣ, ಜಯರಾಮು, ಚಾಮೇಗೌಡ, ಬಲ್ಲೇನಹಳ್ಳಿ ಮಹೇಶ್, ಚಂದಗಾಲು ಪುರುಷೋತ್ತಮ್, ಕೃಷ್ಣ, ರಾಮಚಂದ್ರು, ಶಂಕರ್, ಮೇಳಾಪುರ ಬಾಲು, ಕೆಂಪೇಗೌಡ, ರಾಮಕೃಷ್ಣ ಭಾಗವಹಿಸಿದ್ದರು.