ಅಣ್ಣೂರು ಗ್ರಾಮದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಐತಿಹಾಸಿಕ ಕುರುಕ್ಷೇತ್ರ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಕದಲೂರು ರವಿ ಆರ್ಥಿಕ ನೆರವು ನೀಡಿದರು. 
ಮಂಡ್ಯ

ಪೌರಾಣಿಕ ನಾಟಕಗಳು ಇತಿಹಾಸ ತಿಳಿಸುವ ಮಾಧ್ಯಮ

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಕದಲೂರು ರವಿ ಅಭಿಪ್ರಾಯ

ಕೆ.ಎಂ.ದೊಡ್ಡಿ: ಪೌರಾಣಿಕ ನಾಟಕಗಳು ಕೇವಲ ಮನರಂಜನೆಯ ಸಾಧನಗಳಲ್ಲ. ಸನಾತನ ಇತಿಹಾಸ, ಸಂಪ್ರದಾಯ, ಸಂಸ್ಕೃತಿ ಹಾಗೂ ಧರ್ಮದ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಪ್ರಮುಖ ಮಾಧ್ಯಮಗಳಾಗಿವೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ, ಸಮಾಜ ಸೇವಕ ಕದಲೂರು ರವಿ ತಿಳಿಸಿದರು.

ಸಮೀಪದ ಅಣ್ಣೂರು ಗ್ರಾಮದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಐತಿಹಾಸಿಕ ಕುರುಕ್ಷೇತ್ರ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಯುಗದಲ್ಲಿ ಯುವಜನತೆ ಮೊಬೈಲ್, ಅಂತರ್ಜಾಲ ಹಾಗೂ ತಂತ್ರಜ್ಞಾನದತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಮತ್ತು ರಂಗಕಲೆಗಳು ಇಂದಿಗೂ ಜೀವಂತವಾಗಿರುವುದು ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ರಂಗ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಮಹಾಭಾರತದಂತಹ ಮಹಾಕಾವ್ಯಗಳು ಧರ್ಮ, ನ್ಯಾಯ, ಸತ್ಯ, ತ್ಯಾಗ, ಕರ್ತವ್ಯನಿಷ್ಠೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರುತ್ತವೆ. ಪೌರಾಣಿಕ ನಾಟಕಗಳ ಮೂಲಕ ಇಂತಹ ಮೌಲ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯುವಜನರಲ್ಲಿ ನೈತಿಕ ಪ್ರಜ್ಞೆ, ಹಿರಿಯರ ಬಗ್ಗೆ ಗೌರವ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನ ಬೆಳೆಸುವಲ್ಲಿ ರಂಗಕಲೆಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಕಲಾವಿದರನ್ನು ಪ್ರೋತ್ಸಾಹಿಸುವುದರ ಜತೆಗೆ ಗ್ರಾಮೀಣ ರಂಗಭೂಮಿಯನ್ನು ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಲಾ ಪ್ರೋತ್ಸಾಹಕ್ಕಾಗಿ ಧನಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮನ್ಮುಲ್ ನಿರ್ದೇಶಕ ಎ.ಎಸ್. ರಾಜೀವ್, ಜಿ. ಪಂ.ಮಾಜಿ ಸದಸ್ಯ ಸುರೇಶ್ ಕಂಠಿ, ವರದರಾಜು, ರಾಮಣ್ಣ, ಮನೋಹರ್, ರಾಘವೇಂದ್ರ, ಮರಿಸ್ವಾಮಿ, ಯೋಗೇಂದ್ರ ಇತರರಿದ್ದರು.