ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪೌರಕಾರ್ಮಿಕರು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು.  ಪಾಂಡವ ಕ್ರೀಡಾಂಗಣ
ಮಂಡ್ಯ

ಮನೋದೈಹಿಕ ಸದೃಢಕ್ಕೆ ಕ್ರೀಡೆ ಸಹಕಾರಿ

ಪಪಂ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅಭಿಪ್ರಾಯ

ಪಾಂಡವಪುರ: ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಪುರಸಭೆ ಪೌರಕಾರ್ಮಿಕರಿಗಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಚಾಲನೆ ನೀಡಿದರು.

ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಲೆಮನ್ ಇನ್ ಸ್ಪೂನ್, ಹಗ್ಗ ಜಗ್ಗಾಟ, ನೀರು ತುಂಬಿಸುವ ಸ್ಪರ್ಧೆ, ಗುಂಡು ಎಸೆತ, ಉದ್ದ ಜಿಗಿತ ಹಾಗೂ ಓಟದ ಸ್ಪರ್ಧೆಯನ್ನು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಕ್ರೀಡಾಕೂಟದಲ್ಲಿ ಪೌರಕಾರ್ಮಿಕರೊಂದಿಗೆ ಪುರಸಭೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಪೌರಕಾರ್ಮಿಕರಿಗೆ ಉತ್ತೇಜನ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಪೌರಕಾರ್ಮಿಕರಿಗೆ ಒಂದು ದಿನ ರಜೆ ಘೋಷಣೆ ಮಾಡಿ ಕ್ರೀಡಾಕೂಟ ಆಯೋಜನೆ ಮೂಲಕ ಪೌರಕಾರ್ಮಿಕರ ದಿನವನ್ನು ಆಚರಿಸಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಗುವುದು ಎಂದರು.

ಪ್ರತಿದಿನ ಪಟ್ಟಣದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರು ಜಂಜಾಟದಿಂದ ಹೊರಬಂದು ಕ್ರೀಡೆಯಲ್ಲಿ ಭಾಗವಹಿಸಿದರೆ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಜತೆಗೆ ಕ್ರೀಡೆ ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಹಿರಿಯ ಆರೋಗ್ಯಾಧಿಕಾರಿ ಧನಲಕ್ಷ್ಮೀ, ಮಂಜುನಾಥ್, ನಾಗೇಶ್, ಮಣಿಪ್ರಸಾದ್, ಮಹೇಶ್, ನರಸಿಂಹ, ಕೃಷ್ಣ, ಪೌರಕಾರ್ಮಿಕರಾದ ಈಶ್ವರ, ಶಿವಕುಮಾರ್, ಕೃಷ್ಷ ಇತರರು ಇದ್ದರು.