ಮದ್ದೂರು: ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲಿನ ಪುಡಿ ಹಾಗೂ ಕೋಟ್ಯಂತರ ರೂ. ಮೌಲ್ಯದ ಹಾಲಿನ ಪುಡಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಠಾಣೆ ಪೊಲೀಸರು ಮನ್‌ಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಯು.ಸಿ.ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದ್ದಾರೆ.
ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್ ಅಧಿಕಾರಿ ಅಶ್ವಿನಿ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಾದ ಪ್ರದೀಪ್‌ಕುಮಾರ್ ಜಾಧವ್, ರಾಮಕೃಷ್ಣ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಹಿಂದೆ ಅಧ್ಯಕ್ಷರಾಗಿದ್ದ ಯು.ಸಿ.ಶಿವಕುಮಾರ್ ಅವರನ್ನೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಅವರು ಸೋಮವಾರ ರಾತ್ರಿ ಮದ್ದೂರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಕಲಬೆರಕೆ ಹಾಲಿನಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಸಿ.ಶಿವಕುಮಾರ್‌ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಸೋಮವಾರ ತಡರಾತ್ರಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ವಿಚಾರಣೆಗೆ ಶಿವಕುಮಾರ್ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗಲು ವಿಳಂಬ ಧೋರಣೆ ಅನುಸರಿಸಿದಾಗ ಯು.ಸಿ.ಶಿವಕುಮಾರ್ ಸಹೋದರ ಯು.ಸಿ.ಶೇಖರ್ ಅವರನ್ನು ಮದ್ದೂರು ಪೊಲೀಸರು ಸೋಮವಾರ ಸಂಜೆ ವಿಚಾರಣೆಗೆ ಕರೆತಂದಿದ್ದರು.
ನಂತರದಲ್ಲಿ ತಡರಾತ್ರಿ ವೇಳೆಗೆ ಯು.ಸಿ.ಶಿವಕುಮಾರ್ ಮದ್ದೂರು ಠಾಣೆಗೆ ಹಾಜರಾಗಿದ್ದಾರೆ. ಕಲಬೆರಕೆ ಹಾಲಿನಪುಡಿ ಪ್ರಕರಣದಲ್ಲಿ ಯು.ಸಿ.ಶಿವಕುಮಾರ್ ಪಾತ್ರವಿರುವುದು ಕಂಡುಬಂದ ಅಂಶಗಳನ್ನು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ವಿಚಾರಣಾ ಹಂತದಲ್ಲಿರುವುದರಿಂದ ಪೊಲೀಸರು ಕೂಡ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ.
ಪ್ರಕರಣದ ಹಿನ್ನೆಲೆ ಮತ್ತು ತಪಾಸಣೆ: ಕಳೆದ ಜೂನ್ 2026ರಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಗೆಜ್ಜಲಗೆರೆಯ ಮನ್‌ಮುಲ್ ಆವರಣ ಹಾಗೂ ಖಾಸಗಿ ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದಾಗ 57 ಟನ್ (ಸ್ಕಿಮ್ಡ್ ಮಿಲ್ಕ್ ಪೌಡರ್) ಕಳಪೆ ಹಾಗೂ ನಿಯಮಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಹಾಲಿನ ಪುಡಿಯನ್ನು ಗುರುತಿಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
ಆಹಾರ ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಹಾಲಿನ ಪುಡಿಯು ಗುಣಮಟ್ಟದ ಮಾನದಂಡಗಳನ್ನು ತಲುಪಿಲ್ಲ ಮತ್ತು ಬಳಕೆಗೆ ‘ಅಸುರಕ್ಷಿತ’ ಎಂದು ದೃಢಪಟ್ಟಿತು. ಈ ಸಂಬಂಧ ಮನ್‌ಮುಲ್ ವತಿಯಿಂದ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕರ್ತವ್ಯ ಲೋಪ ಹಾಗೂ ಅಕ್ರಮಕ್ಕೆ ಸಹಕರಿಸಿದ ಆರೋಪದ ಮೇಲೆ ಮನ್‌ಮುಲ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು.
ನಿರ್ದೇಶಕರು ಹಾಗೂ ಮಧ್ಯವರ್ತಿಗಳ ಭಾಗಿ ಶಂಕೆ: ಪ್ರಕರಣದಲ್ಲಿ ಗೋದಾಮಿನ ಮಾಲೀಕರು, ಮಧ್ಯವರ್ತಿಗಳು ಹಾಗೂ ಮನ್‌ಮುಲ್‌ನ ಕೆಲವು ನಿರ್ದೇಶಕರ ಕೈವಾಡವಿರುವ ಬಗ್ಗೆ ಪೊಲೀಸರು ಹಾಗೂ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿ ತನಿಖೆ ಚುರುಕುಗೊಳಿಸಿದರು.