ಹಲಗೂರು ಸಮೀಪದ ಕುಂತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆಂಪೇಗೌಡ, ಮುಖ್ಯ ಶಿಕ್ಷಕಿ ರೂಪಾ, ಕೆ.ಟಿ.ಶಂಕರೇಗೌಡ, ಉಷಾ, ವಿಷಕಂಠೇಗೌಡ, ರವಿಕುಮಾರ್, ಇಂದ್ರಮ್ಮ, ಗೌರಮ್ಮ, ಚಿಕ್ಕಲಿಂಗೇಗೌಡ, ಗೀತಾ, ನಸ್ರಿನ್ ತಾಜ್, ಮಹೇಂದ್ರ, ಈಶ, ಸರೋಜಮ್ಮ, ಮಂಜುಳಾ, ಪುಟ್ಟಭದ್ರಮ್ಮ ಇತರರಿದ್ದರು. 
ಮಂಡ್ಯ

ಪಠ್ಯದ ಜತೆ ಸಾಹಿತ್ಯ ಜ್ಞಾನವೂ ಮುಖ್ಯ

ಮುಖ್ಯ ಶಿಕ್ಷಕ ಪಾರ್ಥಸಾರಥಿ ಅಭಿಪ್ರಾಯ

ಹಲಗೂರು: ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜತೆಗೆ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗಿವೆ ಎಂದು ಮುಖ್ಯ ಶಿಕ್ಷಕ ಪಾರ್ಥಸಾರಥಿ ತಿಳಿಸಿದರು.

ಸಮೀಪದ ಕುಂತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಪಠ್ಯದ ಜ್ಞಾನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಅಭಿನಯ ಹಾಗೂ ಭಾಷಣ ಕೌಶಲಗಳ ಬೆಳವಣಿಗೆಯೂ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ ಎಂದರು.

ಸಿಆರ್‌ಪಿ ಕೆ.ಟಿ.ಶಂಕರೇಗೌಡ ಮಾತನಾಡಿ, ಪ್ರತಿಭಾ ಕಾರಂಜಿಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಹೊರತರುವ ಪ್ರಮುಖ ವೇದಿಕೆಯಾಗಿದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಮುಖ್ಯವಾಗಿದ್ದು, ಬಹುಮಾನಕ್ಕಿಂತಲೂ ಅನುಭವ ಮತ್ತು ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ 12 ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಧಾರ್ಮಿಕ ಪಠಣ, ದೇಶಭಕ್ತಿಗೀತೆ, ಕಥೆ ಹೇಳುವುದು, ಕಂಠಪಾಠ, ಚಿತ್ರಕಲೆ, ಪ್ರಬಂಧ ರಚನೆ, ಛದ್ಮವೇಷ, ಅಭಿನಯಗೀತೆ, ಭಕ್ತಿಗೀತೆ, ಆಶುಭಾಷಣ, ಮಿಮಿಕ್ರಿ ಹಾಗೂ ಕನ್ನಡ ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಕೆಂಪೇಗೌಡ, ಮುಖ್ಯ ಶಿಕ್ಷಕಿ ರೂಪಾ, ಕೆ.ಟಿ.ಶಂಕರೇಗೌಡ, ಉಷಾ, ವಿಷಕಂಠೇಗೌಡ, ರವಿಕುಮಾರ್, ಇಂದ್ರಮ್ಮ, ಗೌರಮ್ಮ, ಚಿಕ್ಕಲಿಂಗೇಗೌಡ, ಗೀತಾ, ನಸ್ರಿನ್ ತಾಜ್, ಮಹೇಂದ್ರ, ಈಶ, ಸರೋಜಮ್ಮ, ಮಂಜುಳಾ, ಪುಟ್ಟಭದ್ರಮ್ಮ ಇತರರಿದ್ದರು.