ಕೆ.ಆರ್.ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎನ್.ಆರ್.ಚೇತನಾ, ಡಾ.ಪ್ರಫುಲ್ಲಾ,ಜಿ.ಮೋಹನ್, ಟಿ.ಬಿ.ಜಯರಾಮ್, ಚಂದ್ರು ಇದ್ದರು. 
ಮಂಡ್ಯ

ನಾಯಿ ಕಚ್ಚಿದ 12 ಗಂಟೆಯೊಳಗೆ ಲಸಿಕೆ ಪಡೆಯಿರಿ

ಡಾ.ಎನ್.ಆರ್.ಚೇತನಾ ಸಲಹೆ

ಕೆ.ಆರ್.ಸಾಗರ: ಆರೋಗ್ಯ ಇಲಾಖೆ ಮತ್ತು ಕೆ.ಆರ್.ಸಾಗರ ಆರೋಗ್ಯ ಕ್ಷೇಮ ಕೇಂದ್ರ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರೇಬಿಸ್ ದಿನ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಆರ್.ಚೇತನಾ ಉದ್ಘಾಟಿಸಿದರು.

ಯಾರಿಗಾದರೂ ಸಾಕು ಅಥವಾ ಬೀದಿ ನಾಯಿ ಕಚ್ಚಿದಾಗ ತಡ ಮಾಡದೆ ಆದ್ಯತೆ ಮೇರೆಗೆ ಕಚ್ಚಿದ ಜಾಗವನ್ನು ಸೋಪು ಮತ್ತು ಶುದ್ಧ ಹರಿಯುವ ನೀರಿನಲ್ಲಿ 15 ನಿಮಿಷ ತೊಳೆಯಬೇಕು. ನಂತರ ಕಡ್ಡಾಯವಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ತೆರಳಿ 12 ಗಂಟೆಯೊಳಗೆ ಎಆರ್‌ವಿ ಲಸಿಕೆ ಪಡೆದುಕೊಳ್ಳಬೇಕು. ಈ ಸೌಲಭ್ಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಡಾ.ಎನ್.ಆರ್.ಚೇತನಾ ಹೇಳಿದರು.

ರೇಬಿಸ್ ರೋಗದಿಂದ ಉಂಟಾಗುವ ಮರಣವನ್ನು ಶೇ.ನೂರಕ್ಕೆ ನೂರರಷ್ಟು ತಡೆಗಟ್ಟಬಹುದು. ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ಇಮ್ಯೂನೊ ಗ್ಲ್ಯಾಬುಲಿನ್ (ಆರ್‌ಐಜಿ) ಅನ್ನು ಕಚ್ಚಿದ ಜಾಗಕ್ಕೆ ನೀಡಲಾಗುವ ಚುಚ್ಚುಮದ್ದಾಗಿದ್ದು ಅಗತ್ಯವಿದ್ದವರಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು.ಅಲ್ಲಿ ಉಚಿತವಾಗಿ ಆರ್‌ಐಜಿ ಚುಚ್ಚುಮದ್ದು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಆರ್.ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಫಲ್ಲಾ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಟಿ.ಬಿ.ಜಯರಾಮ್, ಪ್ರಭಾರ ಪ್ರಾಂಶುಪಾಲ ಚಂದ್ರು, ಉಪನ್ಯಾಸಕರಾದ ಎಸ್.ಕುಮಾರ್, ಯೋಗರಾಜ್, ರವಿ, ಪ್ರತಿಭಾ, ರಮ್ಯಾ, ಆಶಾ ಕಾರ್ಯಕರ್ತೆ ರೂಪಾ, ಲತಾ ಇತರರಿದ್ದರು.