ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಿಕ್ಷಣ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಆಶಾಲತಾ ಪುಟ್ಟೇಗೌಡ, ಮಂಜುರಾಂ ಪುಟ್ಟೇಗೌಡ, ಶಿವಕುಮಾರ್, ಚನ್ನಕೇಶವ ಇತರರು ಇದ್ದರು. 
ಮಂಡ್ಯ

ನಾಡು-ನುಡಿಯ ಮಾತೃಪ್ರೇಮ ಜೀವಂತವಾಗಿರಲಿ

ಆಶಾಲತಾ ಪುಟ್ಟೇಗೌಡ ಸಲಹೆ

ಶ್ರೀರಂಗಪಟ್ಟಣ: ನಾಡು-ನುಡಿಯ ಮಾತೃಪ್ರೇಮ ಸದಾ ನಮ್ಮಲ್ಲಿ ಜೀವಂತವಿದ್ದಾಗ ಮಾತ್ರ ನಮ್ಮ ಏಳಿಗೆ ಮತ್ತು ಜ್ಞಾನಕ್ಕೆ ಅರ್ಥ ಸಿಗುತ್ತದೆ ಎಂದು ಓಂ ಶ್ರೀನಿಕೇತನ ಶಿಕ್ಷಣ ಟ್ರಸ್ಟ್ ಮುಖ್ಯಸ್ಥೆ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಆಶಾಲತಾ ಪುಟ್ಟೇಗೌಡ ತಿಳಿಸಿದರು.

ಪಟ್ಟಣದ ಓಂ ಶ್ರೀನಿಕೇತನ ಶಿಕ್ಷಣ ಟ್ರಸ್ಟ್ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಏಕೀಕರಣ ನಂತರ ನಾಡಿನ ಸಮಸ್ತ ಕನ್ನಡಿಗರೆಲ್ಲರೂ ನಮ್ಮವರು ಎಂಬ ಮನೋಭಾವದೊಂದಿಗೆ ನ.1ರಂದು ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಗುತ್ತದೆ. ಆದರೆ ನಾಡು, ನುಡಿ, ಗಡಿಯ ವಿಷಯದಲ್ಲಿ ಯಾರೂ ನಮಗೆ ಸಮಾನರಲ್ಲ. ನಾವೆಲ್ಲರೂ ಕನ್ನಡಿಗರಾಗಿರಬೇಕು, ಮಾತೃಪ್ರೇಮದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಜತೆಗೆ ನೈಜ ಕನ್ನಡಿಗರಾಗಬೇಕು ಎಂದರು.

ಇಂತಹ ಉತ್ತಮ ವೇದಿಕೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕೌಶಲಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಮಾಜಕ್ಕೆ ಹಾಗೂ ನಾಡಿಗೆ ಕೀರ್ತಿ ತರಲಿ ಎಂದು ಹಾರೈಸಿದರು.

ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಗಳಿಸಿ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿನಿಯರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಶಾಲೆಯ ಅಧ್ಯಕ್ಷ ಮಂಜುರಾಂ ಪುಟ್ಟೇಗೌಡ, ಓಂ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ಶಿವಕುಮಾರ್, ಪರಿವರ್ತನ ಕಾಲೇಜು ಪ್ರಾಂಶುಪಾಲ ಚನ್ನಕೇಶವ, ಸಮಾಜ ಸೇವಕ ರುಕ್ಮಾಂಗದ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ, ಶಿಕ್ಷಕರು ಇದ್ದರು.