ನಾಗಮಂಗಲ: ಮಾಜಿ ಶಾಸಕ ಸುರೇಶ್‌ಗೌಡರ ಅವಧಿಯಲ್ಲಿ ಬಗರ್‌ಹುಕುಂ ಸಾಗುವಳಿ ಸಮಿತಿಯಲ್ಲಿ ಮಂಜೂರಾಗಿದ್ದ ತಾಲೂಕಿನ 694 ಬಡ ರೈತರ ಸಾಗುವಳಿ ಪತ್ರಗಳನ್ನು ರಾಜ್ಯ ಸರ್ಕಾರ ವಜಾಗೊಳಿಸಿರುವುದನ್ನು ಖಂಡಿಸಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ವತಿಯಿಂದ ಅ.2ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಸಿ.ಚನ್ನಪ್ಪ ತಿಳಿಸಿದರು.
ಮಾಜಿ ಶಾಸಕ ಸುರೇಶ್‌ಗೌಡ ಅವರ ನೇತೃತ್ವದಲ್ಲಿ ಅ.2ರಂದು ಬೆಳಗ್ಗೆ 10 ಗಂಟೆಗೆ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಜಮೀನು ಮಂಜೂರಾತಿ ಕೋರಿ ಬಗರ್‌ಹುಕುಂ ಸಾಗುವಳಿ ಸಮಿತಿಗೆ ಅರ್ಜಿ ಸಲ್ಲಿಸಿದ್ದ ತಾಲೂಕಿನ ನೂರಾರು ಬಡ ರೈತರಿಂದ ಕಳೆದ 2021ರಿಂದ 2023ರವರೆಗಿನ ಮಾಜಿ ಶಾಸಕ ಸುರೇಶ್‌ಗೌಡರ ಅವಧಿಯಲ್ಲಿ ಕಿಮ್ಮತ್ತು ಶುಲ್ಕ ಕಟ್ಟಿಸಿಕೊಂಡು ಆರ್‌ಟಿಸಿ ಇಂಡೀಕರಣ ಮಾಡಿ ಕಾನೂನಾತ್ಮಕವಾಗಿ ಜಮೀನು ಮಂಜೂರು ಮಾಡಿಕೊಡಲಾಗಿತ್ತು. ಸಂಬಂಧಿಸಿದ ರೈತರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೆ ಸರ್ಕಾರ ಏಕಾಏಕಿ 694 ಸಾಗುವಳಿ ಪತ್ರಗಳನ್ನು ವಜಾಗೊಳಿಸುವ ಮೂಲಕ ಬಡ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದರು.
ಜೆಡಿಎಸ್ ಮುಖಂಡ ಪುಟ್ಟರಾಜು ಮಾತನಾಡಿ, ರಾಜ್ಯ ಸರ್ಕಾರ 694 ಸಾಗುವಳಿ ಪತ್ರಗಳನ್ನು ವಜಾಗೊಳಿಸಿರುವುದರಿಂದ ತಾಲೂಕಿನ ಭೂರಹಿತ ಬಡವರು ಹಾಗೂ ಶೋಷಿತರು ದೌರ್ಜನ್ಯಕ್ಕೊಳಗಾಗಿದ್ದಾರೆ. ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬುದನ್ನು ಸರ್ಕಾರ ಜನರಿಗೆ ತಿಳಿಸಬೇಕು. ರಾಜ್ಯ ಸರ್ಕಾರ ಘೋಷಿಸಿರುವ ಕೇವಲ 2,500 ಬರ ಪರಿಹಾರದಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ರೈತರನ್ನು ರಕ್ಷಿಸಿ ಉಳಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ರೈತರು ಹಾಗೂ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಸಂತೋಷ್, ಮುಖಂಡರಾದ ಅಂಕುಶಾಪುರ ಶಿವರಾಜು ಮತ್ತು ದೇವರಮಲ್ಲನಾಯ್ಕನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಇದ್ದರು.