ಮೇಲುಕೋಟೆ: ಪ್ರಕೃತಿ ಆರಾಧನೆ ಹಾಗೂ ವನಭೋಜನದ ಮಹತ್ವವಿರುವ ಸಂತಾನಭಾಗ್ಯ ಕರುಣಿಸುವ ಶ್ರೀ ಚೆಲುವನಾರಾಯಣಸ್ವಾಮಿ ತೊಟ್ಟಿಲಮಡು ಜಾತ್ರಾ ಮಹೋತ್ಸವ ಎಂದೇ ಪ್ರಖ್ಯಾತವಾದ ಅಷ್ಟತೀರ್ಥೋತ್ಸವ ಮೇಲುಕೋಟೆಯಲ್ಲಿ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ವಜ್ರಖಚಿತ ರಾಜಮುಡಿ ಕಿರೀಟಧರಿಸಿ ಶ್ರೀದೇವಿಭೂದೇವಿ ಸಮೇತ ಚೆಲುವನಾರಾಯಣಸ್ವಾಮಿಯ ಉತ್ಸವ ಬೆಳಗ್ಗೆ 9ಗಂಟೆಗೆ ಕಲ್ಯಾಣಿಗೆ ತಲುಪಿದ ನಂತರ ಗಜೇಂದ್ರವರದನ ಸನ್ನಿಧಿಯ ಮುಂಭಾಗ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಸ್ವಾಮಿಯ ಪಾದುಕೆಗೆ ಮಂಗಳದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಪೂಜೆಯ ನಂತರ ಚೆಲುವನಾರಾಯಣಸ್ವಾಮಿಯ ಬಂಗಾರದ ಪಾದುಕೆಗೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ದೇವಾಲಯದ ಕೈಂಕರ್ಯಪರರ ಪತ್ನಿಯರು ಸಂತನಾಭಾಗ್ಯ ಅಪೇಕ್ಷಿಸಿ ಹರಕೆಯಲ್ಲಿ ಭಾಗವಹಿಸಲು ಬಂದ ಗೃಹಿಣಿಯರಿಗೆ ಮಡಿಲು ತುಂಬುವ ಕಾರ್ಯ ಮಾಡಿ ಶುಭಹಾರೈಸಿದರು. ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನಡೆದ ನಂತರ ಸ್ವಾಮಿಯ ಉತ್ಸವ ದೇವಾಲಯಕ್ಕೆ ಮರಳಿತು.
ಅಷ್ಠತೀರ್ಥೋತ್ಸವ ಪ್ರಮುಖ ಕೈಂಕರ್ಯ ಅಂಗವಾಗಿ ಚೆಲುವನಾರಾಯಣಸ್ವಾಮಿಯ ಬಂಗಾರದ ಪಾದುಕೆಯನ್ನು ಪುಟ್ಟಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ಯದುಗಿರಿಯ ಬೆಟ್ಟಗುಡ್ಡಗಳ ಮಧ್ಯೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿರುವ ವೇದಪುಷ್ಕರಣಿ, ಧನುಷ್ಕೋಟಿ, ಯಾದವಾತೀರ್ಥ, ದರ್ಬತೀರ್ಥ, ಪಲಾಶರತೀರ್ಥ ಪದ್ಮತೀರ್ಥ, ನರಸಿಂಹತೀರ್ಥ, ನಾರಾಯಣತೀರ್ಥವೆಂಬ ಎಂಟು ತೀರ್ಥಗಳಿಗೆ ಕೊಂಡೋಯ್ದು ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.
ಕಲ್ಯಾಣಿಯಿಂದ ವೈಕುಂಠಗಂಗೆಯವರೆಗೆ ಎಲ್ಲ ತೀರ್ಥಗಳಲ್ಲಿ ನೂರಾರು ಭಕ್ತರು ಪವಿತ್ರಸ್ನಾನ ಮಾಡಿದರು. ಸಂಜೆ ಕಣಿವೆ ಬಳಿಯಿರುವ ವೈಕುಂಠಗಂಗೆಯಲ್ಲಿ ಪಾದುಕೆಗೆ ಕೊನೆಯ ಅಭಿಷೇಕ ಮಾಡಿದ ನಂತರ ಪಾದುಕಾ ಸಮೇತವಾದ ಪಲ್ಲಕ್ಕಿ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ಮಾಡಿ ಒಟ್ಟಾರೆ 20 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿ ರಾಯಗೋಪುರದ ಮೂಲಕ ರಾತ್ರಿ 9ಗಂಟೆಯ ವೇಳೆಗೆ ದೇವಾಲಯ ತಲುಪುವುದರೊಂದಿಗೆ ತೊಟ್ಟಿಲ ಮಡು ಜಾತ್ರೆ ಸಂಪನ್ನವಾಯಿತು.
ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪಾಂಡವಪುರ ತಹಸೀಲ್ದಾರ್ ಆದರ್ಶ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಎಂ.ಎನ್.ಪಾರ್ಥಸಾರಥಿ ಸಿಬ್ಬಂದಿ ಮತ್ತು ಕೈಂಕರ್ಯಪರರ ಸಹಕಾರದಲ್ಲಿ ಧಾರ್ಮಿಕ ವಿಧಿವಿಧಾನ ನಿರ್ವಹಿಸಿದರು.
ಮನಸೂರೆಗೊಂಡ ದೀಪಾಲಂಕಾರ : ಮೇಲುಕೋಟೆ ತೊಟ್ಟಿಲಮಡು ಜಾತ್ರಾ ಮಹೋತ್ಸವದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮಾಡಿಸಿದ್ದ ಆಕರ್ಷಕ ದೀಪಾಲಂಕಾರ ಭಕ್ತರ ಮೆಚ್ಚುಗೆಗೆ ಕಾರಣವಾಗಿತ್ತು.
ಕದಂಬ,ದದಿಯೋದನ ಪ್ರಸಾದ ವಿನಿಯೋಗ: ಮೇಲುಕೋಟೆಯ ಕಣಿವೆಯ ಸಮೀಪವಿರುವ ತೊಟ್ಟಿಲಮಡು ವೈಕುಂಠಗಂಗೆಯ ಬಳಿ ರಾತ್ರಿ ನಡೆದ ಜಾತ್ರೆ ವೇಳೆ 25 ಸಾವಿರಕ್ಕೂ ಅಧಿಕ ಭಕ್ತರಿಗೆ ವಿವಿಧ ಜನಾಂಗಗಳ ವತಿಯಿಂದ ಮೇಲುಕೋಟೆಯ ವಿಶಿಷ್ಠ ಪ್ರಸಾದವಾದ ಕದಂಬ ಮತ್ತು ದದಿಯೋದನ ಪ್ರಸಾದ ವಿತರಿಸಲಾಯಿತು. ಮೇಲುಕೋಟೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 10ಗಂಟೆಯವರೆಗೆ ಭಕ್ತರು ವೈಕುಂಠನಾಥನಿಗೆ ಪೂಜೆ ನೆರವೇರಿಸಿದರು. ತೊಟ್ಟಲುಮುಡು ಬಳಿಗೆ ವಾಹನಗಳ ಪ್ರವೇಶ ನಿಷೇಧಿಸಿದ್ದ ಮೇಲುಕೋಟೆ ಪೊಲೀಸರು ವ್ಯವಸ್ಥಿತವಾಗಿ ಸಂಚಾರ ದಟ್ಟಣೆ ನಿಯಂತ್ರಿಸಿದರು.