ನಾಗಮಂಗಲ: ವಾಲ್ಮೀಕಿ ಮಹರ್ಷಿಗಳು ತಮ್ಮ ಪೂರ್ವಜೀವನದಲ್ಲಿ ಕ್ರೂರವಾದ ಹಿನ್ನೆಲೆ ಹೊಂದಿದ್ದು, ತದನಂತರ ಮನಃಪರಿವರ್ತನೆಗೊಂಡು ಮಹಾಕಾವ್ಯವನ್ನೇ ರಚಿಸಿದ ಮಹಾನೀಯರಾಗಿದ್ದು, ಜೀವನದ ಮೌಲ್ಯಗಳನ್ನು ಒಳಗೊಂಡಿರುವ ಪವಿತ್ರವಾದ ಗ್ರಂಥ ರಾಮಾಯಣ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಿಯಾಗಿದೆ ಎಂದು ತಹಸೀಲ್ದಾರ್ ಡಾ. ಅಶೋಕ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರವು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಾ ಬಂದಿದೆ. ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಉನ್ನತಿ ಸಾಧಿಸಬೇಕು. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಪಾಲಕರು ಹೆಚ್ಚಿನ ಆದ್ಯತೆ ನೀಡಿ. ಜಗತ್ತಿಗೆ ಮೊಟ್ಟಮೊದಲು ಸಂಸ್ಕೃತದಲ್ಲಿ ಶ್ರೇಷ್ಠ ರಾಮಾಯಣ ಗ್ರಂಥವನ್ನು ನೀಡಿದ ದಾರ್ಶನಿಕ ಮಹರ್ಷಿ ವಾಲ್ಮೀಕಿ. ಪ್ರಪಂಚಕ್ಕೆ ಹಲವು ಮೊದಲುಗಳನ್ನು ಕೊಟ್ಟ ದೇಶ ನಮ್ಮದು. ಇಂತ ಶ್ರೇಷ್ಠ ಭೂಮಿಯಲ್ಲಿ ಜನಿಸಿರುವುದೇ ನಮ್ಮ ಪುಣ್ಯ. ನಾವು ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಆಗ ಮಾತ್ರವೇ ಜ್ಞಾನದ ವೃದ್ಧಿ ಸಾಧ್ಯ. ವಾಲ್ಮೀಕಿ ಅವರ ಬದುಕಿನಲ್ಲಿ ಹಲವು ಅಡೆ-ತಡೆಗಳು ಬಂದರೂ ಸಹ ಅವರಲ್ಲಿದ್ದ ಶ್ರದ್ಧೆ ಶಿಸ್ತಿನಿಂದ ಯಶಸ್ಸು ಸಾಧಿಸಿದರು. ಆದ್ದರಿಂದ ಪ್ರತಿಯೊಬ್ಬರ ಬದುಕಿನಲ್ಲೂ ಹತ್ತು ಹಲವು ತಿರುವುಗಳು ಇರುತ್ತವೆ. ಅವುಗಳನ್ನು ನಿಮ್ಮ ಗುರಿಯೆಡೆಗೆ ತಿರುಗಿಸಿ ಸಾಧನೆ ಮಾಡುವುದೇ ಮುಖ್ಯವಾಗಿರಿಸಿಕೊಳ್ಳಿ ಎಂದರು.
ಕದಬಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಉಪನ್ಯಾಸಕಿ ಅನಿತಾ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಗಣ್ಯರು ಮತ್ತು ಅಧಿಕಾರಿಗಳು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮುದಾಯದ ಸಾಧಕರನ್ನು ಮತ್ತು ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಇಒ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣ್, ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ, ಸಿಡಿಪಿಒ ಕೃಷ್ಣಮೂರ್ತಿ, ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.