ಕಿಕ್ಕೇರಿ: ರಸ್ತೆಗಳು ಜನಸಾಮಾನ್ಯರ ಬದುಕಿನ ಜೀವನಾಡಿಯಾಗಿವೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಹೋಬಳಿಯ ತುಳಸಿ, ಬಸವನಹಳ್ಳಿ ಗ್ರಾಮದ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಒಂದು ಗ್ರಾಮದ ಅಭಿವೃದ್ಧಿಯಾಗಿದೆ ಎಂದರೆ ಮೊದಲು ಇಂತಹ ಗ್ರಾಮಕ್ಕೆ ಸುಲಲಿತವಾಗಿ ಓಡಾಡುವಂತಿರಬೇಕು. ಕನಿಷ್ಠ ಪ್ರಮಾಣದಲ್ಲಿ ಮೂಲಸೌಕರ್ಯ ಇರಬೇಕು. ಈ ನಿಟ್ಟಿನಲ್ಲಿ ಅನುದಾನಕ್ಕೆ ಸರ್ಕಾರದೊಂದಿಗೆ ಹೋರಾಟ ಮಾಡಿ ಅನುದಾನ ತರಬೇಕಾಗಿದೆ ಎಂದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಈ ಪ್ರದೇಶದ ಗ್ರಾಮಸ್ಥರು ಕಾಮಗಾರಿ ಗುಣಮಟ್ಟಕ್ಕೆ ವೀಕ್ಷಣೆ ಮಾಡಬೇಕು. ನಿಮ್ಮೂರಿನ ರಸ್ತೆ, ಒಳಚರಂಡಿ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದಿರಿ. ಈ ಬಾರಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದು ನೀರನ್ನು ಮಿತವಾಗಿ ಬಳಸಿ. ಹನಿ ನೀರಾವರಿ ಪದ್ಧತಿಯಲ್ಲಿ ಬೇಸಾಯಕ್ಕೆ ಗಮನಹರಿಸಬೇಕು. ತಾಲೂಕಿನ ಎಲ್ಲ ಗ್ರಾಮಗಳ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬ ಬಲುದೊಡ್ಡ ಆಸೆಯಿಂದ ಕೆಲಸ ಮಾಡುತ್ತಿರುವೆ. ತಾಲೂಕಿನ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಅವಿರತವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಗುಂಡಿ ಬಿದ್ದ ರಸ್ತೆಗಳಿಂದ ಓಡಾಡಲು ಹಗಲು ವೇಳೆಯೇ ವೃದ್ಧರು, ಶಾಲಾ ಮಕ್ಕಳು ಕಷ್ಟಪಡುತ್ತಿದ್ದಾರೆ. ರೈತರು ತಮ್ಮ ಹೊಲ-ಗದ್ದೆಗಳಿಗೆ ತೆರಳಲು, ಬೆಳೆದ ಸಾಮಗ್ರಿ ಸಾಗಿಸಲು ಪರಿತಪಿಸುತ್ತಿರುವುದನ್ನು ಕಂಡಿರುವೆ. ಹಂತಹಂತವಾಗಿ ಆದ್ಯತೆ ಮೇರೆಗೆ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ವಾಸ್ತವ ಸಂಗತಿ ತೆರೆದಿಟ್ಟರು.
ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಮಧು, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಶೇಖರ್, ಕುಮಾರ್, ಗ್ರಾಮ ಮುಖಂಡರು ಹಾಜರಿದ್ದರು.