ನಾಗಮಂಗಲ: ಕಂದಾಯ ಇಲಾಖೆಯ ಮೂಲ ಭೂದಾಖಲೆ ಕಡತಗಳನ್ನು ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ಪ್ರಕರಣ ಸಂಬಂಧ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ಗ್ರೇಡ್-2 ತಹಸೀಲ್ದಾರ್ ಎಂ.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿದೆ.
ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಸುರಕ್ಷತೆಯಿಂದ ಇರಬೇಕಾದ ರೈತರ ಜಮೀನಿಗೆ ಸಂಬಂಧಿಸಿದ ಕಡತಗಳಾದ ಎಂಆರ್, ಆರ್ಆರ್ ಇಂಡೆಕ್ಸ್, ಕೈಬರವಣಿಗೆ ಆರ್ಟಿಸಿ ಸೇರಿದಂತೆ ಮುಂತಾದ ಮೂಲ ದಾಖಲೆಗಳ ಎರಡು ಬಂಡಲ್ಗಳು ಸೆ.15ರಂದು ತಾಲೂಕು ಆಡಳಿತ ಸೌಧದ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು, ತಹಸೀಲ್ದಾರ್ ಗಮನಕ್ಕೆ ತಂದಿದ್ದರು.
ತಹಸೀಲ್ದಾರ್ ಡಾ.ಅಶೋಕ್, ಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಮಹಜರು ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಮೂಲ ಕಡತಗಳನ್ನು ಕಸದ ತೊಟ್ಟಿಗೆ ಯಾರು ಹಾಕಿದವರು? ಯಾವಾಗ, ಯಾವ ಉದ್ದೇಶಕ್ಕೆ ಹಾಕಿದ್ದಾರೆ? ಎಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚುವಂತೆ ಒಬ್ಬರು ಉಪತಹಸೀಲ್ದಾರ್ ಹಾಗೂ ಇಬ್ಬರು ರಾಜಸ್ವ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಭೂದಾಖಲೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಬಗ್ಗೆ ತಹಸೀಲ್ದಾರ್ ಗ್ರೇಡ್-2 ಎಂ.ಮಂಜುನಾಥ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಅಶೋಕ್ಕುಮಾರ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಪ್ರಕರಣ ಸಂಬಂಧ ಅಭಿಲೇಖಾಲಯದ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್ಕುಮಾರ್ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೆ.16ರಂದು ಸೇವೆಯಿಂದ ಅಮಾನತುಗೊಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸೆ.17ರಂದು ಪಟ್ಟಣದ ತಾಲೂಕು ಆಡಳಿತಸೌಧಕ್ಕೆ ಭೇಟಿ ನೀಡಿ, ಕೆಲ ದಾಖಲಾತಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದುಕೊಂಡು ಎಲ್ಲ ಅಂಶಗಳ ಕುರಿತು ಸಿದ್ಧಪಡಿಸಿರುವ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು.
ಮೇಲ್ವಿಚಾರಣಾ ವೈಫಲ್ಯ, ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಗ್ರೇಡ್-2 ತಹಸೀಲ್ದಾರ್ ಎಂ.ಮಂಜುನಾಥ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಮಂಜುನಾಥ್ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ನ.4ರಂದು ಸರ್ಕಾರ ಆದೇಶ ಹೊರಡಿಸಿದೆ.