ಮಳವಳ್ಳಿ ರೈತ ಸಮುದಾಯ ಭವನದಲ್ಲಿ ಸೋಮವಾರ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 1995-96ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ತಮ್ಮ ಅವಧಿಯಲ್ಲಿ ಶಿಕ್ಷಣ ಕಲಿಸಿದ ಗುರುಗಳನ್ನು ಅಭಿನಂದಿಸಿದರು. ರಾವ್ ಸೋಮಶೇಖರ್, ಎಸ್.ಚಂದ್ರಶೇಖರ್, ಎಸ್.ಡಿ.ಜಯರಾಮು, ಎಂ.ಎಸ್.ಜಗದೀಶ್, ಶಾರದಮ್ಮ, ಬಸವರಾಜು, ಡಿ.ಮರಿಸ್ವಾಮಿ ಇತರರಿದ್ದರು.  
ಮಂಡ್ಯ

ಗುರುವಂದನೆ ಶಿಕ್ಷಕರ ವೃತ್ತಿ ಜೀವನಕ್ಕೆ ಸಿಗುವ ಗೌರವ

ಗುರುವಂದನೆ ಶಿಕ್ಷಕರ ವೃತ್ತಿ ಜೀವನಕ್ಕೆ ಸಿಗುವ ಗೌರವ

ಮಳವಳ್ಳಿ: ಶಿಕ್ಷಕರನ್ನು ನೆನೆದು ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶಿಕ್ಷಕರ ವೃತ್ತಿ ಜೀವನಕ್ಕೆ ಸಿಗುವ ಗೌರವದ ಸಾರ್ಥಕತೆ ಎಂದು ನಿವೃತ್ತ ಶಿಕ್ಷಕ ರಾವ್ ಸೋಮಶೇಖರ್ ಹೇಳಿದರು.

ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 1995-96ನೇ ಸಾಲಿನ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಒಗ್ಗೂಡಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುರು ಎಂಬ ಪದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪೂಜ್ಯ ಭಾವನೆಯಿಂದ ನಾವು ಗೌರವಿಸಿಕೊಂಡು ಬಂದಿದ್ದೇವೆ. ಅಂದಿನ ಗುರುಕುಲದ ಶಿಕ್ಷಣದಲ್ಲಿ ಗುರು-ಹಿರಿಯರಿಗೆ ಗೌರವಿಸುವುದರ ಬಗ್ಗೆ ಮಕ್ಕಳಿಗೆ ಮೊದಲ ಆದ್ಯತೆ ನೀಡುವುದರ ಜತೆಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇಂದಿಗೂ ಅಂತಹ ಕಲಿಕಾ ಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತಿದ್ದು, ಇದಕ್ಕೆ ಪೂರಕವೆಂಬತೆ ಎರಡು ದಶಕ ಕಳೆದರೂ ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಹಿರಿಯ ವಿದ್ಯಾರ್ಥಿಗಳು ಸಮಾಗಮಗೊಂಡು ಗುರುವಂದನೆ ಸಲ್ಲಿಸುವ ಸಮಾರಂಭ ಸಾಕ್ಷಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಎಸ್.ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ಯಾಂತ್ರಿಕ ಕಾಲಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು, ಹಿರಿಯರನ್ನು ಗೌರವಿಸುವ ವಿಚಾರವಾಗಿ ಮಕ್ಕಳಲ್ಲಿ ಅರಿವು ನೀಡುವ ಕೊರತೆ ಇದೆ. ಇದು ಸಮಾಜಕ್ಕೆ ಮಾರಕವಾಗುವ ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಕಾರ್ಯಕ್ರಮ ಪ್ರಾರಂಭದಲ್ಲಿ ನಿಧನವೊಂದಿರುವ ತಮ್ಮ ಶೈಕ್ಷಣಿಕ ಅವಧಿಯ ಸಹಪಾಠಿಗಳು ಹಾಗೂ ಶಿಕ್ಷಕರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮಾರಂಭದಲ್ಲಿ 1995-96ರಲ್ಲಿ ಶಿಕ್ಷಕರಾಗಿದ್ದ ರಾವ್ ಸೋಮಶೇಖರ್, ಎಸ್.ಡಿ.ಜಯರಾಮು, ಎಸ್.ಚಂದ್ರಶೇಖರ್, ಎಂ.ಎಸ್.ಜಗದೀಶ್, ಶಾರದಮ್ಮ, ಬಸವರಾಜು, ಡಿ.ಮರಿಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 40ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಮಾಗಮಗೊಂಡು ಸಹಪಾಠಿಗಳ ಜತೆಗೆ ತಮ್ಮ ಶೈಕ್ಷಣಿಕ ದಿನಗಳನ್ನು ಮೆಲುಕು ಹಾಕುವುದರ ಮೂಲಕ ಸಂಭ್ರಮಿಸಿದರು.