ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಸೆಂಟ್ರಲ್ ಭಾರತೀನಗರ ವತಿಯಿಂದ ಶ್ರೀಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.  
ಮಂಡ್ಯ

ಹಲ್ಲು, ಬಾಯಿ ಸ್ವಚ್ಛತೆ ಕಾಪಾಡಿಕೊಳ್ಳಿ

ವೈದ್ಯ ಡಾ.ಮುರಳೀಧರ್ ಸಲಹೆ

ಕೆ.ಎಂ.ದೊಡ್ಡಿ: ದಂತ ಹಾಗೂ ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೆ ಪ್ರತಿಯೊಬ್ಬರೂ ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಶ್ರೀಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಮುರಳೀಧರ್ ತಿಳಿಸಿದರು.

ಸಮೀಪದ ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಸೆಂಟ್ರಲ್ ಭಾರತೀನಗರ ವತಿಯಿಂದ ಶ್ರೀಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಹಲ್ಲು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದು ಎಂದು ತಿಳಿಸಿದರು.

ರೋಟರಿ ಭಾರತನಗರ ಸೆಂಟ್ರಲ್ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ರೋಟರಿ ಸಂಸ್ಥೆ ಸದಾ ಬದ್ಧವಾಗಿದೆ. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಇಂತಹ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ದಂತ ಆರೋಗ್ಯವೂ ಒಟ್ಟಾರೆ ಆರೋಗ್ಯದ ಪ್ರಮುಖ ಭಾಗವಾಗಿದೆ. ಅನೇಕರು ದಂತ ಸಮಸ್ಯೆಗಳು ಕಾಣಿಸಿಕೊಂಡರೂ ಆರಂಭಿಕ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಸಮಸ್ಯೆ ಉಲ್ಬಣಗೊಂಡು ಹೆಚ್ಚಿನ ಚಿಕಿತ್ಸೆ ಅಗತ್ಯವಾಗುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದಂತ ಹಾಗೂ ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಂಡರು. ತಪಾಸಣೆ ವೇಳೆ ಅಗತ್ಯವಿದ್ದ 50ಕ್ಕೂ ಹೆಚ್ಚು ರೋಗಿಗಳಿಗೆ ಸ್ಥಳದಲ್ಲಿಯೇ ಉಚಿತ ದಂತ ಚಿಕಿತ್ಸೆ ನೀಡಲಾಯಿತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶಿಬಿರ ಯಶಸ್ವಿಯಾಗಿ ನಡೆಯಿತು. ಮಂಡ್ಯ ಜಿಲ್ಲೆಯ ದಂತ ವೈದ್ಯಾಧಿಕಾರಿಗಳಾದ ಡಾ. ಸುಪ್ರೀಕ್ ಹಾಗೂ ಡಾ. ನವೀನ್ ಅವರು ಶಿಬಿರದಲ್ಲಿ ಉಪಸ್ಥಿತರಿದ್ದರು.

ರೋಟರಿ ಕಾರ್ಯದರ್ಶಿ ಡಾ. ಸೌಮ್ಯಾ ರಾಜೇಶ್, ಸದಸ್ಯರಾದ ಕುಮಾರ್ ರಾಜು, ಶಶಿಕುಮಾರ್, ಮಹೇಶ್, ಕೆಂಪೇಗೌಡ, ಸಿದ್ದೇಗೌಡರು, ರಮೇಶ್, ನಂದೀಶ್, ವರಲಕ್ಷ್ಮೀ ಇತರರು ಇದ್ದರು.