ನಾಗಮಂಗಲ ತಾಲೂಕು ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ನವೋತ್ಥಾನ, ಗುರುವಂದನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಡಿ.ಆರ್.ಅಮಿತ್ ಉದ್ಘಾಟಿಸಿದರು. ಡಾ.ಎಸ್.ಎನ್.ಶ್ರೀಧರ್, ಡಾ.ಎ.ಟಿ.ಶಿವರಾಮು ಇದ್ದರು. 
ಮಂಡ್ಯ

ಕೌಶಲ ರೂಢಿಸಿಕೊಂಡು ಶ್ರೇಷ್ಠ ಶಿಕ್ಷಕರಾಗಿ

ಮೈಸೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ಆರ್.ಅಮಿತ್ ಸಲಹೆ

ನಾಗಮಂಗಲ: ಶಿಕ್ಷಣವೆಂಬುದು ಸಂಸ್ಕಾರ, ಶಿಕ್ಷಕನೆಂದರೆ ಜವಾಬ್ದಾರಿ. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿ ಪಡೆಯಲು ಪೂರ್ವ ಜನ್ಮದ ಪುಣ್ಯವಿರಬೇಕು ಎಂದು ಮೈಸೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ಆರ್.ಅಮಿತ್ ತಿಳಿಸಿದರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ನವೋತ್ಥಾನ, ಗುರುವಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕಾರ ಪಡೆದವನು ಶ್ರೇಷ್ಠ ವಿದ್ವಾಂಸನಾಗುತ್ತಾನೆ ಎಂಬ ಮಾತಿನಂತೆ ಈ ಪವಿತ್ರ ಕ್ಷೇತ್ರದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಕಲಿತ ನೀವು ಉತ್ತಮ ಶಿಕ್ಷಕರಾಗುವ ಎಲ್ಲ ಲಕ್ಷಣಗಳಿವೆ. 28 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಅನೇಕ ವಿಶೇಷ ಅನುಭವಗಳನ್ನು ಪಡೆದಿದ್ದೇನೆ. ಸಿಟಿಇ ಮುಖ್ಯಸ್ಥರಾಗಿ 8 ಜಿಲ್ಲೆಗಳ ಬಿ.ಇಡಿ ಕಾಲೇಜು ಶೈಕ್ಷಣಿಕ ಗುಣಮಟ್ಟಕ್ಕೆ ಹೋಲಿಸಿದರೆ ಸರ್ವಾಂಗೀಣ ಪ್ರಗತಿಯ ಈ ಕಾಲೇಜಿಗೆ ಪ್ರಥಮ ಸ್ಥಾನದ ಎಲ್ಲ ಅರ್ಹತೆಗಳನ್ನು ಹೊಂದಿದೆ. ಕೌಶಲಗಳನ್ನು ರೂಢಿಸಿಕೊಂಡು ಶ್ರೇಷ್ಠ ಶಿಕ್ಷಕರಾಗಿ ಎಂದರು.

ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಬಸವರಾಜು ಮಾತನಾಡಿ, ಸಮಾಜದ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ. ನಿರಂತರ ಕಲಿಕೆಯಿಂದ ಕಠಿಣ ಸ್ಪರ್ಧಾ ಜಗತ್ತನ್ನು ಎದುರಿಸಲು ಗುಣಾತ್ಮಕ ಕಲಿಕೆ ಮತ್ತು ನಿತ್ಯ ಪರಿಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆ. ಶ್ರೀಗಳ ಆಶೀರ್ವಾದದಿಂದ ಸಂಸ್ಕಾರಯುತ ಶಿಕ್ಷಣ ಪಡೆಯುತ್ತಿರುವ ನೀವು ಶ್ರೇಷ್ಠ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಆದ್ಯತೆ ಕೊಟ್ಟು ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಹೇಳಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ಮಾತನಾಡಿ, ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಕಲಿತಿರುವ ನೀವು ನಮ್ಮ ಹೆಮ್ಮೆಯ ರಾಯಭಾರಿಗಳು. ಶಿಕ್ಷಣ ಮುಗಿಸಿ ಹೊರಹೋಗಿ ನಮ್ಮ ಸಂಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವ ನಿಮ್ಮ ಅಭಿಮಾನಕ್ಕೆ ನಾವು ಋಣಿಯಾಗಿದ್ದೇವೆ. ವಿದ್ಯಾವಂತರು ಸರ್ಕಾರಿ ಶಾಲಾ ಶಿಕ್ಷಕರಾಗಲು ಬಯಸುವುದು ಸಹಜ. ಆದರೆ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದಿರುವುದೆ ವಿಪರ್ಯಾಸ ಎಂದರು.

ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವಣ್ಣ, ಮಂಗಳೂರು ಡಯಟ್‌ನ ಹಿರಿಯ ಉಪನ್ಯಾಸಕ ಡಿ.ಶಿವಾನಂದ, ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ.ಶಿವರಾಮು, ಸಹಾಯಕ ಪ್ರಾಧ್ಯಾಪಕ ಎ.ಎಚ್.ಗೋಪಾಲ್, ವಿ.ಪುಟ್ಟಸ್ವಾಮಿ, ಲೋಕೇಶ್ ಕುಮಾರ್, ಸಿ.ಎಲ್.ಶಿವಣ್ಣ, ಡಾ.ಎಂ.ಶೋಭಾ, ಡಾ. ಎ.ಸಿ. ದೇವಾನಂದ್, ವೈ.ಎಚ್.ರವಿಕುಮಾರ್, ಬಿ.ಎನ್.ದೇವರಾಜು, ಜಿ.ಹಂಪೇಶ್ ಇದ್ದರು.