ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ಗ್ರಾಮದ ಐದನೇ ನಂಬರ್ ಗರೀಬಿ ಕಾಲನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಮತ್ತು ಮನ್ಮುಲ್ ವತಿಯಿಂದ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಹರೀಶ್‌ಬಾಬು, ಎ.ಎಸ್.ರಾಜೀವ್, ಮಂಜೇಶ್, ಸಂದರ್ಶ, ರಾಘು, ಅಮೀನ್ ಶಿವಲಿಂಗಯ್ಯ ಇತರರಿದ್ದರು.  
ಮಂಡ್ಯ

ಕೆ.ಎಂ.ದೊಡ್ಡಿ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಶಾಸಕ ಕೆ.ಎಂ.ಉದಯ್ ಹೇಳಿಕೆ

ಕೆ.ಎಂ.ದೊಡ್ಡಿ: ಮದ್ದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವನ್ನು ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಸಮೀಪದ ಮೆಳ್ಳಹಳ್ಳಿ ಗ್ರಾಮದ 5ನೇ ನಂಬರ್ ಗರೀಬಿ ಕಾಲನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಮತ್ತು ಮನ್ಮುಲ್ ವತಿಯಿಂದ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆ.ಎಂ.ದೊಡ್ಡಿ ಪಟ್ಟಣವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಮೆಳ್ಳಹಳ್ಳಿ ಸೇರಿದಂತೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲಸೌಕರ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿರುವ ದೇವಸ್ಥಾನ ನಿರ್ಮಾಣಕ್ಕೂ ಶೀಘ್ರದಲ್ಲೇ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಯಾವುದೇ ಲೋಪವಿಲ್ಲದೆ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮನ್ಮುಲ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಮೆಳ್ಳಹಳ್ಳಿ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಪೌರಕಾರ್ಮಿಕರು ವಸತಿಗೃಹ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಕೆ.ಎಂ.ಉದಯ್, ಗ್ರಾಮದಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ಪೌರಕಾರ್ಮಿಕರ ವಸತಿಗೃಹ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಸೂಚಿಸಿದರು.

ಗ್ರಾಮಸ್ಥರು ವಿವಿಧ ಸಮಸ್ಯೆಗಳ ಕುರಿತು ಸಲ್ಲಿಸಿದ ಮನವಿಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಧನಸಹಾಯ ನೀಡಲಾಯಿತು.

ಮನ್ಮುಲ್ ಅಧ್ಯಕ್ಷ ಹರೀಶ್‌ಬಾಬು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮನ್ಮುಲ್ ನಿರ್ದೇಶಕ ಎ.ಎಸ್.ರಾಜೀವ್, ಉಪವ್ಯವಸ್ಥಾಪಕ ಮಂಜೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಟಿಎಪಿಸಿಎಂಎಸ್ ನಿರ್ದೇಶಕ ರಾಘು, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಮುಖಂಡರಾದ ಕೆ. ಕಬ್ಬಾಳಯ್ಯ, ಗ್ರಾಪಂ ಮಾಜಿ ಸದಸ್ಯರಾದ ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ಕೆ.ಟಿ.ಶ್ರೀನಿವಾಸ್, ವೆಂಕಟೇಶ್, ಮಹದೇವ, ಸಿದ್ದರಾಜು, ಶಂಕರ, ರಂಗೇಗೌಡ, ಶಿವಮ್ಮ, ಮಂಜುಳಾ, ಗಿರಿಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.