ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಗೆ ರಾಜಮುಡಿ ಕಿರೀಟಧಾರಣ ಮಹೋತ್ಸವ ನ.17ರಂದು ರಾತ್ರಿ 7ಗಂಟೆಗೆ ನಡೆಯಲಿದ್ದು ಒಂಬತ್ತು ದಿನಗಳ ಕಾರ್ತಿಕ ಮಾಸದ ಬ್ರಹ್ಮೋತ್ಸವ ಶನಿವಾರ ಗರುಡ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ವಾರ್ಷಿಕವಾಗಿ ನಡೆಯುವ ಮೂರು ಬ್ರಹ್ಮೋತ್ಸವಗಳ ಪೈಕಿ ರಾಜಮುಡಿ ಜಾತ್ರೆ ಕಾರ್ತಿಕ ಮಾಸದಲ್ಲಿ ನಡೆಯಲಿದ್ದು, ವರ್ಷದ ಕೊನೆಯ ಬ್ರಹ್ಮೋತ್ಸವವಾಗಿದೆ. ಜಾತ್ರಾ ಮಹೋತ್ಸವದ ನಾಲ್ಕನೇ ತಿರುನಾಳ್ ದಿನವಾದ ಮಂಗಳವಾರ ರಾತ್ರಿ 7ಗಂಟೆಗೆ ಮೈಸೂರು ಸಂಸ್ಥಾನದ ದೊರೆ ರಾಜ ಒಡೆಯರ್ ಸಮರ್ಪಿಸಿರುವ ರಾಜಮುಡಿ ಕಿರೀಟ, ಗಂಢಬೇರುಂಡ ಪದಕ ಸೇರಿದಂತೆ 16 ಬಗೆಯ ವಜ್ರಾಭರಣಗಳಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಉತ್ಸವ ನೆರವೇರಿಸುವುದು ರಾಜಮುಡಿ ಉತ್ಸವದ ವಿಶೇಷ. ನವೆಂಬರ್ 22 ರಂದು ತೀರ್ಥಸ್ನಾನ ಮಹೋತ್ಸವ ಕಲ್ಯಾಣಿಯಲ್ಲಿ ನಡೆಯಲಿದೆ.
ರಾಜಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಪ್ರತಿವರ್ಷಕ್ಕಿಂತ ಭಿನ್ನವಾಗಿ ವಿಶೇಷ ತೋಮಾಲೆ ಮತ್ತು ಮಂಗಳವಾದ್ಯ ವ್ಯವಸ್ಥೆ ಮಾಡಿ ಉತ್ಸವ ನಡೆಸಲಾಗುತ್ತಿದೆ. ಅದೇ ದಿನ ತಮಿಳುನಾಡಿನ ಸರ್ಕಾರದ ವಿಶೇಷ ಆದೇಶದನ್ವಯ ರಾಮಾನುಜಾಚಾರ್ಯರ ಗುರುಗಳಾದ ಎಂಬಾರ್ ದೇವಾಲಯದಿಂದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಗೌರವಾರ್ಪಣೆ ಮಾಡಲಾಗುತ್ತಿದ್ದು, ಹಿರಿಯ ಅಧಿಕಾರಿಗಳು, ಅರ್ಚಕರು ಭಾಗವಹಿಸಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ತೊಟ್ಟಿಲಮಡು ಜಾತ್ರೆ:
ಚೆಲುವನಾರಾಯಣ ಸ್ವಾಮಿಯ ತೊಟ್ಟಿಲ ಮುಡು ಜಾತ್ರೆಯೆಂದೇ ಪ್ರಖ್ಯಾತವಾಗಿರುವ ಅಷ್ಠತೀರ್ಥೋತ್ಸವ ನ.19ರಂದು ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ರಾಜಮುಡಿ ಧರಿಸಿದ ಚೆಲುವನಾರಾಯಣ ಸ್ವಾಮಿಯ ಉತ್ಸವ ಕಲ್ಯಾಣಿಗೆ ನೆರವೇರಿದ ವೇಳೆ ಪಾದುಕೆಗೆ ಪ್ರಥಮ ಅಭಿಷೇಕ ನಡೆಯುತ್ತದೆ. ನಂತರ ಯದುಗಿರಿಯ ಬೆಟ್ಟಗುಡ್ಡಗಳ ಮಧ್ಯೆ ಇರುವ ಎಂಟು ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನಡೆದ ನಂತರ ಸಂಜೆಯ ವೇಳೆಗೆ ವೈಕುಂಠ ಗಂಗೆಯಲ್ಲಿ ಕೊನೆಯ ಅಭಿಷೇಕ ನೆರವೇರುತ್ತದೆ. ಇದೇ ವೇಳೆ ತೊಟ್ಟಿಲಮಡು ಜಾತ್ರೆ ನಡೆಯುತ್ತದೆ. ಈ ವೇಳೆ ಬಂಡೆಗಳು, ಮರಗಳು ಹಾಗೂ ಮಂಟಪಗಳಿಗೆ ವಿಶೇಷ ದೀಪಾಲಂಕಾರ, ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.