ಶ್ರೀರಂಗಪಟ್ಟಣ: ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,500 ರೂ. ನಿಗದಿ ಮಾಡಿ, ಕಬ್ಬು ಬೆಳೆಗಾರರ ನೆರವಿಗೆ ಧಾವಿಸುಂತೆ ಆಗ್ರಹಿಸಿ, ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಕಬ್ಬಿನ ತುಂಡುಗಳ ಜತೆಗೆ ಪತ್ರ ರವಾನೆ ಮಾಡಿದರು.
ಪಟ್ಟಣದ ಕೊರಿಯರ್ ಕಚೇರಿ ಬಳಿ ಶುಕ್ರವಾರ ಜಮಾಯಿಸಿದ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ಬಾಬು ಮಾತನಾಡಿ, ಮಹಾತ್ಮಾಗಾಂಧೀಜಿ ಅವರು ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು. ಆದರೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರ ಬೆನ್ನೆಲುಬನ್ನೇ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ಎಷ್ಟೇ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಅಕ್ಕಪಕ್ಕದ ರಾಜ್ಯಗಳು ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ಸೂಕ್ತ ಬೆಲೆ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿವೆ. ರೈತರು ಬೆಳೆಯುವ ಪ್ರತಿ ಟನ್ ಕಬ್ಬಿಗೆ ಗರಿಷ್ಟ 7 ಸಾವಿರ ರೂ. ನೀಡಬೇಕು ಆದರೆ, ನಾವು ಕನಿಷ್ಟ 4,500 ರೂ. ಕೇಳುತ್ತಿದ್ದರೂ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಉದ್ಯಮಿಗಳ ಪರ ನಿಂತು ಅವರನ್ನು ಬೆಳೆಸುತ್ತಿರುವಂತೆ ರೈತರನ್ನು ಬೆಳೆಸಬೇಕು. ಕೂಡಲೇ ಮಧ್ಯ ಪ್ರವೇಶ ಮಾಡಿ ರಾಜ್ಯದ ಕಬ್ಬು ಬೆಳೆಗಾರರಿಗೆ ಕನಿಷ್ಠ ಟನ್ ಕಬ್ಬಿನ ಬೆಲೆ 4,500 ರೂ. ನಿಗದಿ ಮಾಡಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರಲ್ಲದೆ, ಕಬ್ಬಿನ ತುಂಡುಗಳ ಜತೆಗೆ ಪತ್ರ ಬರೆದು ಕೊರಿಯರ್ ಮೂಲಕ ರವಾನೆ ಮಾಡಿದರು.
ವೇದಿಕೆ ಪದಾಧಿಕಾರಿಗಳಾದ ದರಸಗುಪ್ಪೆ ಪ್ರಭಾಕರ್, ಕೂಡಲಕುಪ್ಪೆ ಮಹೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಹಿರಿಯ ಪದಾಧಿಕಾರಿ ಅಂಕಶೆಟ್ಟಿ, ಮಹಿಳಾ ಕಾರ್ಯದರ್ಶಿ ಛಾಯಾದೇವಿ, ಪುಟ್ಟಮ್ಮ, ನಾಗೇಂದ್ರ, ಸಣ್ಣಮ್ಮ, ಮನೋಜ್ ಸೇರಿದಂತೆ ಇತರರು ಹಾಜರಿದ್ದರು.