ಶ್ರೀರಂಗಪಟ್ಟಣ: ತಾಲೂಕಿನ ಮುಂಡುಗದೊರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಶಾಸಕ ಎ.ಬಿ ರಮೇಶಬಾಬು ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಸಕರು ಮಾತನಾಡಿ, ಮುಂದಿನ ಒಂದು ತಿಂಗಳಲ್ಲಿ ಸರ್ಕಾರದ ವತಿಯಿಂದ ಬಿ ಖಾತಾದಿಂದ ಎ ಖಾತೆಗೆ ಪರಿವರ್ತಿಸಿಕೊಳ್ಳಲು ಅರ್ಜಿ ಆಹ್ವಾನಿಸುತ್ತಿದೆ. ಯಾವುದೇ ಮೂಲ ದಾಖಲಾತಿಗಳಿಲ್ಲದೆ ಮನೆ ನಿರ್ಮಿಸಿಕೊಂಡು ವಾಸವಿದ್ದವರು ತಮ್ಮ ಮಾಲೀಕತ್ವದ ಪತ್ರವಾದ ಎ ಖಾತೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಗ್ರಾಮೀಣ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಕಂದಾಯಗಳನ್ನು ಪಾವತಿಸದಿದ್ದಲ್ಲಿ ಸರ್ಕಾರ ಹಲವು ಯೋಜನೆಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ಸಕಾಲದಲ್ಲಿ ಕಂದಾಯ ಪಾವತಿಸಬೇಕು. ಗ್ರಾಮದ ರಸ್ತೆ, ಚರಂಡಿ ಸೇರಿದಂತೆ ಇತರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರೈತರು ಈಗಾಗಲೇ ಬೆಳೆದಿರುವ ಬೆಳೆಗಳಿಗೆ ಕಟ್ಟ ಪದ್ಧತಿಯಡಿ ನೀರು ಹರಿಸಿ ಬೆಳೆಗಳನ್ನು ಉಳಿಸಲಾಗುವುದು. ರೈತರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಬಸವನಪುರ ಉಪ ಗ್ರಾಮವನ್ನಾಗಿ ಪರಿವರ್ತಿಸಿ ಅಲ್ಲಿನ ಮನೆಗಳ ನಿವಾಸಿಗಳಿಗೆ ಹಕ್ಕುಪತ್ರದ ಜತೆ ಎ ಖಾತೆ ಮಾಡಿಸಿಕೊಡಲಾಗುತ್ತದೆ. ಅಲ್ಲದೆ, ದೊಡ್ಡಪಾಳ್ಯ ಗ್ರಾಮದ ಹಾಲಿನ ಡೇರಿ ಕಟ್ಟಡ ಶಿಥಿಲವಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ಒಂದು ಕೋಟಿ ರೂ.ಹಣ ನೀಡಿ, ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕರು ಹೇಳಿದರು.
ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮುಂಡುಗದೊರೆ, ದೊಡ್ಡಿ, ಅಲ್ಲಾಪಟ್ಟಣ ಸೇರಿದಂತೆ ಇತರ ಗ್ರಾಮಗಳ ರೈತರು, ಪಿಂಚಣಿ ಫಲಾನುಭವಿಗಳು, ಹಕ್ಕುಪತ್ರ ಫಲಾನುಭವಿಗಳು ಶಾಸಕರಿಗೆ ತಮ್ಮ ಸಮಸ್ಯೆಗಳ ಸಂಬಂಧ ಮನವಿ ಸಲ್ಲಿಸಿ ಸ್ಥಳದಲ್ಲೇ ಪರಿಹಾರ ಪಡೆದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಚೇತನ ಯಾದವ್, ತಾ.ಪಂ.ಇಒ ಚಂದ್ರು, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರವೀಣ್, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.