ಮದ್ದೂರು ನಗರದ ಬಳಿಯ ಗೊರವನಹಳ್ಳಿ ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿ ದೇಗುಲ ಉದ್ಘಾಟನಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಡಿ.ಸಿ.ತಮ್ಮಣ್ಣ, ವಿವೇಕಾನಂದ, ಕೆ.ಟಿ.ಶ್ರೀಕಂಠೇಗೌಡ, ಯು.ಎಸ್.ರವಿ ಇದ್ದರು. 
ಮಂಡ್ಯ

ಉಚಿತ ಆರೋಗ್ಯ, ಶಿಕ್ಷಣದ ಅಭಿಲಾಷೆ ಜನ ಅರ್ಥ ಮಾಡಿಕೊಳ್ಳಲಿಲ್ಲ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ

ಮದ್ದೂರು: ನಾನು ರೈತರ ಸಾಲ ಮಾಡಿದ್ದೇನೆ ಹೊರತು, ಯಾವುದೇ ರೀತಿಯ ಲೂಟಿ ಮಾಡಲಿಲ್ಲ. ಆದ್ದರಿಂದ ನನ್ನನ್ನು ಹಳ್ಳಿಗುಗ್ಗು ಎನ್ನುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಬಳಿಯ ಗೊರವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಮಾರಮ್ಮ ದೇವಿ ದೇಗುಲ ಉದ್ಘಾಟನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನಲ್ಲಿ ವಿಶ್ವಾಸವಿಟ್ಟು ಬಹುಮತ ನೀಡಿ ಅಧಿಕಾರ ನೀಡಿದರೆ ಉತ್ತಮ ಜನಪರ ಆಡಳಿತ ನೀಡುವ ಆಸೆಯಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಕೊಟ್ಟಿದೆ. ಬಸ್ ದರ ಶೇ.30ಕ್ಕೂ ಹೆಚ್ಚು ಏರಿಕೆ ಮಾಡಲಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ.

2000 ಸಾವಿರ ರೂ. ಸೇರಿದಂತೆ ಎಲ್ಲ ಗ್ಯಾರಂಟಿಗಳನ್ನು ನೀಡುತ್ತಿದ್ದು, ನಿಮ್ಮ ಹಣವನ್ನೇ ತಂದು ಗ್ಯಾರಂಟಿ ಯೋಜನೆಗಳು ಎಂದು ಕೊಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಉಚಿತವಾದ ಆರೋಗ್ಯ, ಉಚಿತವಾದ ವಿದ್ಯಾಭ್ಯಾಸವನ್ನು ಆಳುವ ಸರ್ಕಾರದಿಂದ ಕೊಡುವ ಅಭಿಲಾಷೆಯನ್ನು ಇಟ್ಟುಕೊಂಡಿದ್ದೆ ಆದರೆ ಅದನ್ನು ನೀವು ಏಕೋ ಅರ್ಥ ಮಾಡಿಕೊಳ್ಳಲಿಲ್ಲ, ಕಿವಿಗೂ ಹಾಕಿಕೊಳ್ಳಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಕೈಗಾರಿಗೆಗಳನ್ನು ಸ್ಥಾಪಿಸುವವರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಹೀಗೆ ಅವರು ನಡೆದುಕೊಳ್ಳುತ್ತಿರುವಾಗ ಯಾವ ರೀತಿ ಕೈಗಾರಿಕೆಗಳನ್ನು ರಾಜ್ಯಕ್ಕೆ ತರಲಿ ಎಂದು ಪ್ರಶ್ನಿಸಿದರು. ದೇವಸ್ಥಾನ ತುಂಬಾ ಸುಂದರವಾಗಿದೆ. ಎಲ್ಲರಿಗೂ ಸುಖ ಸಮೃದ್ಧಿ ಉಂಟುಮಾಡಲಿ ಎಂದರು.

200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ :

ನಾನು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ, ಎಷ್ಟೋ ಶಾಲಾ, ಕಾಲೇಜುಗಳನ್ನು ತೆರೆದೆ, ನಂತರ ಕೆಲವು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂದರು.

ಒಂದೇ ತಟ್ಟೆಯಲ್ಲಿ ಊಟ ಮಾಡಿದವರೇ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದ ಅವರು, 3 ಬಾರಿ ಅನಾರೋಗ್ಯದ ಹಿನ್ನೆಯಲ್ಲಿ ಯಮನ ಸಮೀಪಕ್ಕೆ ಹೋಗಿ ನಿಮ್ಮಗಳ ಆಶೀರ್ವಾದದಿಂದ ವಾಪಸ್ ಬಂದಿದ್ದೇನೆ. ನಿಮ್ಮ ಆಶೀರ್ವಾದವಿದ್ದರೆ ಕೈಲಾದ ಮಟ್ಟಿಗೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀ ಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಶ್ರೀ ಮಾರಮ್ಮ ದೇವಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಜಿ.ಬಿ.ಲಿಂಗಯ್ಯ, ಕಾರ್ಯದರ್ಶಿಯು.ಎಸ್.ರವಿ, ಮುಖಂಡರಾದ ರಾಘವ್, ಸುರೇಶ್, ಪ್ರಸನ್ನ, ಸಿದ್ದರಾಜು, ಶಿವರಾಮು ಸೇರಿದಂತೆ ಹಲವರಿದ್ದರು.