ಮದ್ದೂರು: ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವ ಜತೆಗೆ ಮೂಲ ಸೌಲಭ್ಯ ಕಲ್ಪಿಸಲು ಮತ್ತು ವೈದ್ಯರನ್ನು ನಿಯೋಜಿಸುವ ಸಂಬಂಧ ಆರೋಗ್ಯ ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆಲ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ಸಂಬಂಧ ಹಾಗೂ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯೋಜನೆಗೊಳಿಸಿ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಕ್ರಮ ವಹಿಸಿರುವುದಾಗಿ ಹೇಳಿದರು.
ಸಚಿವರು ಅಗಮಿಸುವ ವೇಳೆ ತಾಲೂಕಿನ ಕೆ.ಹೊನ್ನಲಗೆರೆ, ಕೆಸ್ತೂರು, ಬೆಸಗರಹಳ್ಳಿ ಹಾಗೂ ಭಾರತಿನಗರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡುವ ಜತೆಗೆ ಸ್ಥಳೀಯರಿಂದ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುವುದಾಗಿ ಹೇಳಿದರು.
ಈ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಚಿವರ ಭೇಟಿಯ ದಿನಾಂಕ ನಿಗದಿಪಡಿಸಲು ಕ್ರಮ ವಹಿಸುವುದಾಗಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಣಸಿಗುವ ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು, ನಗರಸಭೆ ಮಾಜಿ ಸದಸ್ಯ ಸಿದ್ದರಾಜು, ಪ್ರಜ್ಞಾವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕ ಎಚ್.ಆರ್.ಅನಂತೇಗೌಡ, ಮುಖಂಡರಾದ ಎಂ.ಎಸ್.ಸಂತೋಷ್ಗೌಡ, ಕಿರಣ್ ಕುಮಾರ್, ಕುಶಾಲ್ಗೌಡ, ಸುನಿಲ್ಕುಮಾರ್, ಜಯಂತಿ ಲಾಲ್ ಪಟೇಲ್, ನಗರಕೆರೆ ಶೇಖರ್, ಬಾಬುಎಂ.ಆರ್.ಕಾಳೇಗೌಡ, ಧನಂಜಯ, ಉಮೇಶ್, ರಾಕೇಶ್, ಮಂಜುನಾಥ್, ಶೇಖರ್, ಡಾ.ರವಿಶಂಕರ್, ಮಂಜುನಾಥ್, ಶಿವು, ಗೋಪಿ ಇತರರು ಇದ್ದರು.