ಮದ್ದೂರು: ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಡೇರಿಯಲ್ಲಿ ನಡೆದ ಹಾಲಿನ ಪುಡಿ ಅಕ್ರಮಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಈ ಕೂಡಲೇ ಸಿಬಿಐಗೆ ವಹಿಸಿಬೇಕು ಹಾಗೂ ಹಾಲಿ ಇರುವ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಲು ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಭಾರತ ವತಿಯಿಂದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಲಾಯಿತು.
ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್.ಚಂದ್ರಕುಮಾರ್ ಮಾತನಾಡಿ, ಗೆಜ್ಜಲಗೆರೆಯ ಮನ್‌ಮುಲ್‌ನಲ್ಲಿ ನಡೆದ ಬಹುಕೋಟಿ ಹಾಲಿನ ಪುಡಿಗೆ ನಕಲಿ ಹಾಲಿನ ಪುಡಿ ಮಿಶ್ರಣ ಮಾಡಿರುವುನ್ನು ಖಂಡಿಸಿದರು.
ಈ ವಿಚಾರವಾಗಿ ಅಲ್ಲಿನ ಆಡಳಿತ ಮಂಡಳಿ ಮತ್ತು ನೌಕರರು ಮಾಡಿರುವ ಕೃತ್ಯ ಇಡೀ ಮಾನವ ಸಮಾಜ ತಲೆ ತಗ್ಗಿಸುವಂತಾಗೆ. ರಾಜ್ಯದಲ್ಲಿ ಬಹು ಜನರು ನಂದಿನಿ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಹಾಲಿನ ಪುಡಿ ನಕಲಿಯಾಗಿರುವುದು ರಾಜ್ಯದ ರೈತರಿಗೆ ಮತ್ತು ಗ್ರಾಹಕರಿಗೆ ಮಾಡಿದ ಮೋಸ ಎಂದರು.
ಉದಾಹಾರಣೆಗೆ 2021ನೇ ಸಾಲಿನಲ್ಲಿ ನಡೆದ ಹಾಲಿಗೆ ನೀರು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದೆಂದು ನಮ್ಮ ಸಂಘಟನೆ ಅಂದಿನ ಸರ್ಕಾರಕ್ಕೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಮನವಿ ಮಾಡಿದ್ದೆವು. ಅಂದಿನ ಸರ್ಕಾರ ನಮ್ಮ ಮನವಿಗೆ ಸ್ಪಂಧಿಸದ ಕಾರಣ ಇಂದು ಇಂತಹ ಬಹುಕೋಟಿ ವಂಚನೆ ನಡೆದಿದೆ. ಕೂಡಲೇ ರಾಜ್ಯ ಸರ್ಕಾರ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮರಳಿಗ ಶಿವರಾಜು, ಭೀಮೇಶ್, ನಾಗೇಶ್, ನಾಗರಾಜು, ಮಣಿರಾಜ್ ಸೇರಿದಂತೆ ಇತರರು ಇದ್ದರು.