ಹಲಗೂರು: ಸಮೀಪದ ಅಗಸನಪುರ ಗ್ರಾಮದಲ್ಲಿ ಬಸವೇಶ್ವರಸ್ವಾಮಿ ಬಸಪ್ಪ ದೇವರ 10ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿದವು.
ಗ್ರಾಮದ ಧಾರ್ಮಿಕ ಸಂಪ್ರದಾಯದಂತೆ ನಡೆದ ಪೂಜಾ ಕೈಂಕರ್ಯಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಬೆಳಗ್ಗೆ 9 ಗಂಟೆಯಿಂದ ಬಸವೇಶ್ವರಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ವಿಧಿ-ವಿಧಾನಗಳನ್ನು ಸಲ್ಲಿಸಲಾಯಿತು. ಬಳಿಕ ಕೆರೆಯಿಂದ ಹೂ-ಹೊಂಬಾಳೆ ಸಮೇತ ಸ್ವಾಮಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಕ್ತರು ಭಕ್ತಿ-ಭಾವದಿಂದ ಪಾಲ್ಗೊಂಡು ಬಸಪ್ಪ ದೇವರಿಗೆ ಹೂಮಳೆಗರೆದು ಭಕ್ತಿ ಸಮರ್ಪಿಸಿದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಮೆರವಣಿಗೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಮಧ್ಯಾಹ್ನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದ ಅಂಗವಾಗಿ ಹರಿಕಥಾ ಕಲಾವಿದ ಮಲ್ಲಾರಾಧ್ಯ ಹಾಗೂ ತಂಡದ ಸದಸ್ಯರಿಂದ ಧಾರ್ಮಿಕ ಸಂಗೀತ ಕಾರ್ಯಕ್ರಮಗಳು ನಡೆದವು.
ಅಗಸನಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಕೋಡಿಪುರ, ಹಾಡ್ಲಿ, ಹುಸ್ಕೂರು, ಕುಲುಮೆದೊಡ್ಡಿ, ಬಾಣಗಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕುಟುಂಬ ಸಮೇತರಾಗಿ ಪಾಲ್ಗೊಂಡ ಭಕ್ತರು ಬಸವೇಶ್ವರಸ್ವಾಮಿ ಬಸಪ್ಪ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.