ಶ್ರೀರಂಗಪಟ್ಟಣ ತಾಲೂಕಿನ ಹುರಳಿಕ್ಯಾತನಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಅಕ್ಕಿ ಹಾಗೂ ರಾಗಿಯನ್ನ ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವುದು.  
ಮಂಡ್ಯ

ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಡಿತರ ಅಕ್ಕಿ ವಶ

ಇಟ್ಟಿಗೆ ಕಾರ್ಖಾನೆಯಲ್ಲಿ ಬಚ್ಚಿಟ್ಟುದ್ದು ಪತ್ತೆ

ಶ್ರೀರಂಗಪಟ್ಟಣ: ಅಕ್ರಮವಾಗಿ ದಾಸ್ತಾನು ಮಾಡಿದ್ದ 22 ಕ್ವಿಂಟಾಲ್ ಅಕ್ಕಿ ಹಾಗೂ ರಾಗಿಯನ್ನ ವಶಪಡಿಸಿಕೊಂಡು, ಆರೋಪಿ ವಿರುದ್ಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತಾಲೂಕಿನ ಹುರಳಿಕ್ಯಾತನಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಪಡಿತರದಾರರಿಗೆ ವಿತರಿಸುವ ಅಕ್ಕಿ ಹಾಗೂ ರಾಗಿಯನ್ನ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಪ್ರತೀಕ್ ಹೆಗ್ಡೆ ಅವರ ನಿರ್ದೇಶನದ ಮೇರೆಗೆ ಆಹಾರ ಶಿರಸ್ತೇದಾರ್ ಪೂರ್ಣಿಮಾ, ನಿರೀಕ್ಷಕಿ ಪೂಜಾ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಜಂಟಿಯಾಗಿ ದಾಳಿ ನಡೆಸಿ, 48 ಚೀಲ ಅಕ್ಕಿ ಹಾಗೂ 7 ಚೀಲ ರಾಗಿಯನ್ನ ವಶಪಡಿಸಿಕೊಂಡಿದ್ದಾರೆ.

ಇಟ್ಟಿಗೆ ತಯಾರಿಕಾ ಕಾರ್ಖಾನೆಯು ಚಿಕ್ಕಂಕನಹಳ್ಳಿ ಗ್ರಾಮದ ಪ್ರಭಾವಿ ಮುಖಂಡ ಶಿವಣ್ಣ ಅವರ ಪುತ್ರ ನಿಖಿಲ್ ಎಂಬುವವರಿಗೆ ಸೇರಿದ್ದು, ಇದೀಗ ನಿಖಿಲ್ ವಿರುದ್ಧ ಅರಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಹಾರ ಶಿರಸ್ತೇದಾರ್ ಪೂರ್ಣಿಮಾ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ 55 ಚೀಲ ಅಕ್ಕಿ ಹಾಗೂ ರಾಗಿಯನ್ನ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಇಟ್ಟಿಗೆ ಕಾರ್ಖಾನೆ ಶಿವಣ್ಣ ಎಂಬುವರ ಪುತ್ರ ನಿಖಿಲ್‌ಗೆ ಸೇರಿದ್ದು ಎಂಬುದು ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.