ಕಿಕ್ಕೇರಿ: ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿನ ಪುರಾತನ ಈಶ್ವರ ದೇಗುಲ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಸಂಸ್ಕೃತಿ ಚಿಂತಕ ಗೋಪಾಲಕೃಷ್ಣ ಅವಧಾನಿ ಇತ್ತೀಚೆಗೆ ವೀಕ್ಷಿಸಿದರು.
ದೇಗುಲ ನಿರ್ವಹಣೆ ಕಾಣದೆ ಶಿಥಿಲಾವಸ್ಥೆ ತಲುಪಿತ್ತು.ಗೋಪಾಲಕೃಷ್ಣ ಅವಧಾನಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ಗೆ ಗ್ರಾಮಸ್ಥರ ನಿಯೋಗದೊಂದಿಗೆ ಮನವಿ ಮಾಡಿದ ಪರಿಣಾಮ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆ ವರ್ಷಗಳ ಹಿಂದೆ ಆರಂಭವಾಗಿ ಅಂತಿಮ ಹಂತಕ್ಕೆ ತಲುಪಿದೆ.
ಗ್ರಾಮಸ್ಥರೊಂದಿಗೆ ಅವಧಾನಿಗಳು ಮಾತನಾಡಿ, ದೇಗುಲಕ್ಕೆ ಬಹಳ ಇತಿಹಾಸವಿದೆ. ಈ ಕುರಿತು ವಿಜಯವಾಣಿ ಸಮಗ್ರ ವರದಿಯೊಂದಿಗೆ ಬೆಳಕು ಚೆಲ್ಲಿತ್ತು. ದೇಗುಲದ ಸಮೀಪದ ಕೆರೆ ಕೂಡ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದು ಇದನ್ನು ಕೂಡ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರು ಊಳು ತೆಗೆದು ನೀರು ನಿಲ್ಲುವಂತೆ ಅಭಿವೃದ್ಧಿ ಕೆಲಸ ಮಾಡಿಕೊಟ್ಟಿದ್ದಾರೆ. ದೇಗುಲ ಏಕಕೂಟದಿಂದ ಕೂಡಿದೆ. ಗರ್ಭಗುಡಿ, ನವರಂಗ, ನಂದಿ, ಹಲವು ಚಿತ್ತಾರಗಳನ್ನು ಒಳಗೊಂಡಿದೆ. ದೇಗುಲದ ತುಸು ದೂರದಲ್ಲಿ ಅನಾಥವಾಗಿ ಭೈರವ ದೇವರ ಮೂರ್ತಿ ಬಿದ್ದಿದೆ. ಈ ಸ್ಥಳದಲ್ಲಿ ಈ ಸ್ಥಳದಲ್ಲಿ ಭೈರವ ಗುಡಿ ನಿರ್ಮಿಸಲು ಗ್ರಾಮಸ್ಥರು ಸ್ವ ಇಚ್ಛೆಯಿಂದ ಮುಂದಾಗಿರುವುದು ಪರಂಪರೆ ಉಳಿವಿಗೆ ಸಾಕ್ಷಿಯಾಗಿದೆ ಎಂದು ಪ್ರಶಂಸಿದರು.
ಗ್ರಾಮ ಮುಖಂಡ ದೇವರಾಜು ಮಾತನಾಡಿ, ಹಿಂದೆ ಸಚಿವರಾಗಿದ್ದ ಕೆ.ಸಿ. ನಾರಾಯಣಗೌಡರಿಗೆ ದೇಗುಲ ಜೀರ್ಣೋದ್ಧಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕಾರ್ಯಗತವಾಗಲಿಲ್ಲ. ಈಗ ಪೂಜ್ಯರಾದ ವೀರೇಂದ್ರ ಹೆಗ್ಗಡೆ ಅವರು ಕಾಳಜಿ ವಹಿಸಿ ದೇಗುಲ ಜೀರ್ಣೋದ್ಧಾರ ಮಾಡಿಸಿದ್ದಾರೆ. ಇವರ ಕಾಳಜಿ, ಹಿಂದೂ ಧರ್ಮ, ದೇಗುಲ ಉಳಿವಿಗಾಗಿ ನೆರವು ನೀಡುತ್ತಿರುವ ಸತ್ಕಾರ್ಯಕ್ಕೆ ಇಡೀ ಗ್ರಾಮ ಚಿರಋಣಿಯಾಗಿದೆ ಎಂದರು.
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ ಮಾತನಾಡಿ, ಕ್ರಿ.ಶ. 1117ರಿಂದ 1133ರ ಅವಧಿಯಲ್ಲಿ ಹೊಯ್ಸಳರ ವಿಷ್ಣುವರ್ಧನ ಮಗ ದೊರೆ ಒಂದನೇ ನರಸಿಂಹದೇವ ದ್ವಾರಸಮುದ್ರದಲ್ಲಿ ಆಡಳಿತ ನಡೆಸುವಾಗ ಈ ಭಾಗದ ಅಧಿಕಾರಿ ಹೆಗ್ಗಡೆ ಮಂಜಯ್ಯ ದೇಗುಲ ಹಾಗೂ ಕೆರೆ ನಿರ್ಮಿಸಿದರು. ಕಿಕ್ಕೇರಿಯ ಹಾಲೋಜನ ಮಗ ಶಿಲ್ಪಿ ಬೊಮ್ಮೋಜನಿಗೆ ಭೂಮಿಯನ್ನು ದತ್ತಿ ನೀಡಿದ ದಾಖಲೆ ಶಾಸನದಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಗ್ರಾಮ ಮುಖಂಡರಾದ ದೇವರಾಜೇಗೌಡ, ಬಸವರಾಜು, ಪ್ರಬುದ್ಧ ಪ್ರತಿಷ್ಠಾನದ ಶಮಂತ್ ಮತ್ತಿತರರಿದ್ದರು.