ಮಂಡ್ಯದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
- ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ
ಸರ್ಕಾರದ ವಿಶೇಷ ಅಭಿಯಾನದಡಿ ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗಗಳ ಸೂಕ್ತತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುತಿಸಲಾಗಿರುವ ಸರ್ಕಾರಿ ಜಾಗವು ನಿವೇಶನ ರಚನೆ ಹಾಗೂ ಮನೆ ನಿರ್ಮಾಣಕ್ಕೆ ತಾಂತ್ರಿಕವಾಗಿ ಮತ್ತು ಭೌಗೋಳಿಕವಾಗಿ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಗುಡ್ಡ, ತಗ್ಗು, ಜೌಗು ಪ್ರದೇಶ, ಮುಳುಗಡೆ ಸಾಧ್ಯತೆ, ಅತಿಯಾದ ಎತ್ತರ, ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ತೊಂದರೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳ ಕಾರಣಗಳನ್ನು ಸ್ಪಷ್ಟವಾಗಿ ದಾಖಲಿಸುವಂತೆ ತಿಳಿಸಿದರು.
ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ. ಜಾಗದ ಸೂಕ್ತತೆಯ ಕುರಿತು 10 ದಿನಗಳೊಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಸಿಇಒ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಇರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಸಂಖ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ ದೃಢೀಕರಿಸಬೇಕು. ನಿವೇಶನ ಇದ್ದು, ಮನೆ ಇಲ್ಲದವರು ಹಾಗೂ ನಿವೇಶನವೇ ಇಲ್ಲದವರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ಕಳುಹಿಸಬೇಕು. ಅರ್ಹರಿಗೆ ವಸತಿ ಉದ್ದೇಶಕ್ಕಾಗಿ ಸೂಕ್ತ ಸರ್ಕಾರಿ ಜಾಗವನ್ನು ಗುರುತಿಸಿ ಕಾಯ್ದಿರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲಿಂಕ್ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾ ಯೋಜನೆಯಡಿ ಅನುಮೋದನೆಯಾಗಿರುವ ಎಲ್ಲ ಕಾಮಗಾರಿಗಳ ಪ್ರಗತಿ, ಬಾಕಿ ಇರುವ ಅಂದಾಜುಪಟ್ಟಿ, ತಾಂತ್ರಿಕ ಪರಿಶೀಲನೆ, ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್ ಹಂತದ ಪ್ರಗತಿಯನ್ನು ತಾಲೂಕುವಾರು ಹಾಗೂ ಇಲಾಖಾವಾರು ಪರಿಶೀಲಿಸಿದ ಸಿಇಒ, 2026-27ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾ ಯೋಜನೆಯಡಿ ಅನುಮೋದನೆಯಾಗಿರುವ ಎಲ್ಲ ಕಾಮಗಾರಿಗಳನ್ನು ತ್ವರಿತಗತಿ ಹಾಗೂ ಗುಣಮಟ್ಟದಿಂದ ಅನುಷ್ಠಾನಗೊಳಿಸಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯಾವುದೇ ರೀತಿಯ ವಿಳಂಬವಾಗಬಾರದು. ಅಂತೆಯೇ ಬದಲಾವಣೆ ಅಗತ್ಯವಿದ್ದಲ್ಲಿ ನಿಗದಿತ ಪ್ರಕ್ರಿಯೆಯಂತೆ ತಕ್ಷಣ ಕ್ರಮ ಕೈಗೊಂಡು, ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸಬೇಕು. ಲಿಂಕ್ ಡಾಕ್ಯುಮೆಂಟ್ ಲೆಕ್ಕ ಶೀರ್ಷಿಕೆಯಡಿ ವಿವಿಧ ಇಲಾಖೆಗಳ ಬಾಕಿ ಇರುವ ಎಲ್ಲ ಅಂದಾಜುಪಟ್ಟಿಯನ್ನು ಆ.31ರೊಳಗಾಗಿ ಸಲ್ಲಿಸಿ, ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು ಎಂದರು.
ಯಾವುದೇ ಇಲಾಖೆಯಲ್ಲಿ ಅಂದಾಜುಪಟ್ಟಿ ತಯಾರಿಕೆ ಅಥವಾ ಆಡಳಿತಾತ್ಮಕ ಅನುಮೋದನೆ ಬಾಕಿ ಉಳಿಯದಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ವೈಯಕ್ತಿಕ ಜವಾಬ್ದಾರಿ ವಹಿಸಬೇಕು. ಅಂದಾಜುಪಟ್ಟಿ ಸಲ್ಲಿಕೆಯಲ್ಲಿ ವಿಳಂಬವಾದರೆ ಕಾಮಗಾರಿಗಳ ಅನುಷ್ಠಾನವೂ ವಿಳಂಬವಾಗುವುದರ ಜತೆಗೆ ಅನುದಾನ ಬಳಕೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅನುದಾನ ವ್ಯಪಗತ ಆಗುವಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಎಸ್.ಧನುಷ್, ಉಪ ಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಯೋಜನಾ ನಿರ್ದೇಶಕ ಸುಂದರ್‌ರಾಜ್, ಪಿಆರ್‌ಇಡಿ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಇತರರಿದ್ದರು.