ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಕಾವೆಂಶ್ರೀ ಕಾವ್ಯಯಾನದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರನ್ನು ಅಭಿನಂದಿಸಲಾಯಿತು.  
ಮಂಡ್ಯ

ಯುವ ಗಾಯಕರ ಗಾಯನಕ್ಕೆ ಫಿದಾ: ಮೆಚ್ಚುಗೆ ಗಳಿಸಿದ ಕಾವೆಂಶ್ರೀ ಕಾವ್ಯಯಾನ

ಪ್ರಮುಖ ಮುಖ್ಯಾಂಶಗಳು

  • ಗಾಂಧಿಭವನದಲ್ಲಿ ಸಂಗೀತ ಸಂಜೆಗೆ ತಲೆದೂಗಿದ ಜನ
  • ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಆಯೋಜನೆ
ಮಂಡ್ಯ: ನಗರದ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ನಾಯಕ ಕೆ.ಎಸ್.ಸಚ್ಚಿದಾನಂದ ಸವಿನೆನಪು ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ 25 ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಕಾವೆಂಶ್ರೀ ಕಾವ್ಯಾಯನದಲ್ಲಿ ಯುವ ಗಾಯಕರ ಗಾಯನಕ್ಕೆ ಪ್ರೇಕ್ಷಕರು ಮನಸೋತರು.
ಕವಿ ಕಾ.ವೆಂ.ಶ್ರೀನಿವಾಸಮೂರ್ತಿ ಅವರು ರಚಿಸಿರುವ ಹೊತ್ತಿಸು ಎದೆಯಲಿ ಕನ್ನಡಿಗ(ಡೇವಿಡ್ ಮತ್ತು ತಂಡ), ದೇವರಾಗಲು ಹೊರಟ(ಮೋಹನ್ ರಾಗಿಮುದ್ದನಹಳ್ಳಿ), ಮಳೆ ಸುರಿಯಲಿ ಹೊಳೆ ಹರಿಯಲಿ(ಹಂಸ ಮತ್ತು ತಂಡ), ಸಪ್ತ ಸ್ವರಗಳ ಕೋಗಿಲೆಯೇ (ಶಂಕರ್ ಮತ್ತು ಐಶ್ವರ್ಯಾ), ಬುದ್ಧ ಬಂದ ದಾರಿಯಲ್ಲಿ(ಡೇವಿಡ್ ಮತ್ತು ವೃಂದ), ಕಳೆದುಕೊಂಡ ಅಮ್ಮ(ಶಂಕರ್), ಪುಸ್ತಕವನ್ನು ಪ್ರೀತಿಸಿದವರು(ಕರಣ್‌ವೀರ್), ಕೆಸರಿನ ಕೊಳದಲ್ಲಿ(ಶಶಿಕಲಾ), ಓ ಬೆಟ್ಟ ಬಯಲುಗಳೇ(ವಂದನಾ ಹಾಗೂ ವೃಂದ), ಸಹಿಯು ಇರುವ ತನಕ(ಶಂಕರ್), ನಲ್ಲ ನೀನೊಂದು ಕವನ(ದಿಶಾ ಜೈನ್), ನಾವೆಲ್ಲರೂ ಹಿಂದೂ (ಎರ್ರಿಸ್ವಾಮಿ ಮತ್ತ ವೃಂದ), ನಿನ್ನ ಕೆನ್ನೆಗುಳಿ(ವಿಶ್ವಾಸ್), ಕೋಗಿಲೆಗೆ ಸವಿಗಾನವನು(ಶಂಕರ್ ಹಾಗೂ ಸುಮತಿ), ಹರಿದಿದೆ ನೋಡಿ ಕನ್ನಡ ರಥವು (ರಿಶಾಂಕ್ ಮತ್ತು ವೃಂದ), ಗನ್ನು ನಿಮ್ಮದು ಪೆನ್ನು ನಮ್ಮದು(ಧನಂಜಯ್ ಮತ್ತು ವೃಂದ) ಹಾಗೂ ಎತ್ತ ಸಾಗಿದೆ ಭಾರತವು ಎರ್ರಿ ಸ್ವಾಮಿ ವೃಂದವರು ಹಾಡಿದ ಭಾವಗೀತೆ, ಜನಪರ ಕನ್ನಡಪರ ಗೀತೆಗಳಿಗೆ ಪ್ರೇಕ್ಷಕರು ತಲೆದೂಗಿದರು.
ಇದಕ್ಕೂ ಮೊದಲು ಕಾವ್ಯಾಯನ ಉದ್ಘಾಟಿಸಿ ಮಾತನಾಡಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಮ್ಮ ತಂದೆ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ನೆನೆಸಿಕೊಳ್ಳುತ್ತಿರುವ ಹಾಗೂ ಪ್ರತಿಭಾಂಜಲಿ ಅಕಾಡೆಮಿಗೆ 25 ವರ್ಷ ತುಂಬಿರುವುದು ಸಂತಸ ತಂದಿದೆ, ಡೇವಿಡ್ ಅವರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಿ, ಅವರ ಜತೆ ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಶಾಂತಶ್ರೀ ಮಾತನಾಡಿ, ಡೇವಿಡ್ ಅವರು ಅಕಾಡೆಮಿ ಹೆಸರಲ್ಲಿ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದರಂತೆ ನಮ್ಮ ಕಾರಾಗೃಹದಲ್ಲಿಯೂ ಕೈದಿಗಳಿಗೆ ಹಾಡುಗಳನ್ನು ಹೇಳಿಕೊಡುತ್ತಿದ್ದಾರೆ. ಅವರ ಜನಪರ ಕೆಲಸ ಹೀಗೆ ಸಾಗಲಿ ಎಂದು ಆರೈಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜು ವಿ.ಭೈರಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾಂಜಲಿ ಡೇವಿಡ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ನವೋದಯ ತರಬೇತಿ ಶಿಕ್ಷಕಿ ಎಚ್.ಆರ್.ಕನ್ನಿಕಾ, ಮುಖಂಡರಾದ ದರಸಗುಪ್ಪೆ ಧನಂಜಯ, ಬಿ.ಟಿ.ವಿಶ್ವನಾಥ್, ಎಂ.ಬಿ.ನಾಗಣ್ಣಗೌಡ, ಚಿತ್ರಕೂಟದ ಅರವಿಂದ ಭಾಗವಹಿಸಿದ್ದರು.