ಮದ್ದೂರು ನಗರಸಭೆ ವ್ಯಾಪ್ತಿಯ ಕೆ.ಕೋಡಿಹಳ್ಳಿಯ ಸ್ಮಶಾನಕ್ಕೆ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಯುವಕನ ಅಂತ್ಯಸಂಸ್ಕಾರವನ್ನು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನಡೆಸಲಾಯಿತು. 
ಮಂಡ್ಯ

ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಯುವಕನ ಅಂತ್ಯಕ್ರಿಯೆ

ಸ್ಮಶಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದ ನಗರಸಭೆ ವಿರುದ್ಧ ಆಕ್ರೋಶ

ನಗರಸಭೆ ವ್ಯಾಪ್ತಿಯ ಕೆ.ಕೋಡಿಹಳ್ಳಿಯಲ್ಲಿ ಯುವಕನ ಅಂತ್ಯ ಸಂಸ್ಕಾರವನ್ನು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಅಂತ್ಯಕ್ರಿಯೆ ನಡೆಸಿದ್ದು, ಸ್ಮಶಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದ ನಗರಸಭಾ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಕೋಡಿಹಳ್ಳಿಯ ನಾಗರಾಜ್ ಅವರ ಪುತ್ರ ಶಶಾಂಕ್ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ರುದ್ರಭೂಮಿಯಲ್ಲಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ಅಂತ್ಯಕ್ರಿಯೆ ನಡೆಸಲು ವಿಳಂಬವಾಗಿದೆ. ಅಷ್ಟರಲ್ಲಿ ಸಂಪೂರ್ಣ ಕತ್ತಲಾಗಿದ್ದರಿಂದ ಮೊಬೈಲ್ ಟಾರ್ಚ್ ಬೆಳಕಲ್ಲೆ ಅಂತ್ಯಕ್ರಿಯೆ ನಡೆಸಲಾಗಿದೆ. ಸ್ಮಶಾನದಲ್ಲಿ ಒಂದೇ ಒಂದು ವಿದ್ಯುತ್ ದೀಪವು ಇಲ್ಲ. ಕೈ ಕಾಲು ತೊಳೆಯಲು ಸಹ ಒಂದು ಬೋರ್‌ವೆಲ್ ಹಾಗೂ ರಸ್ತೆ ಹಾಗೂ ಆಸನದ ವ್ಯವಸ್ಥೆಯೂ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕಿದರು.
ಕಳೆದ ಒಂದು ವರ್ಷದ ಹಿಂದೆ ಮದ್ದೂರು ನಗರಸಭೆಗೆ ಸೇರ್ಪಡೆಗೊಂಡಿರುವ ಕೆ.ಕೋಡಿಹಳ್ಳಿ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಹಿಂದೂ ರುದ್ರಭೂಮಿಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆ ರೀತಿ ಮಾರ್ಪಾಡಾಗಿದ್ದು, ಶೀಘ್ರವೇ ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಬೇಕೆಂದು ಸಾರ್ವನಿಕರು ಆಗ್ರಹಿಸಿದ್ದಾರೆ.