ಕೊಲೆ ನಡೆದ ಸ್ಥಳವನ್ನು ಸೋಕೋ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಪರಿಶೀಲಿಸುತ್ತಿರುವ ಚಿತ್ರ.
ಹಲಗೂರು: ಇಲ್ಲಿನ ಹೆದ್ದಾರಿಯ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿ ಸೋಮವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನನ್ನೇ ಬಿಯರ್ ಬಾಟಲ್‌ನಿಂದ ಹತ್ಯೆ ಮಾಡಲಾಗಿದೆ.
ಹಲಗೂರು ಸಮೀಪದ ಎಚ್.ಬಸಾಪುರ ಗ್ರಾಮದ ನಿವಾಸಿ ಮಂಜು ಕಾಶಿ (33) ಮೃತ. ಸೋಮವಾರ ರಾತ್ರಿ ಬಾರ್ ಒಂದರಲ್ಲಿ ಮದ್ಯ ಸೇವಿಸಿದ ಮೂವರು ಸ್ನೇಹಿತರು, ಬಾರ್ ಬಾಗಿಲು ಹಾಕಿದ ನಂತರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿಯ ಖಾಲಿ ಜಾಗಕ್ಕೆ ತೆರಳಿದ್ದಾರೆ. ರಾತ್ರಿ 11 ಗಂಟೆಯ ಸಮಯದಲ್ಲಿ ಮೂವರು ಮಾತಾನಾಡುತ್ತಾ ಕುಳಿತಿದ್ದಾಗ ಸ್ನೇಹಿತರ ಮಧ್ಯೆೆ ಮಾತಿನ ಚಕಮಕಿ ನಡೆದಿದ್ದು, ಹಲಗೂರಿನ ಮೇದರ ಕಾಲನಿ ನಿವಾಸಿ ಪ್ರದೀಪ್ ಅವರ ಪುತ್ರ ಸಿದ್ದರಾಜು ಮತ್ತು ರಾಜಣ್ಣ ಅವರ ಪುತ್ರ ಸಿದ್ದರಾಜು ಇಬ್ಬರು ಸೇರಿ ಮಂಜುಕಾಶಿಗೆ ಬಿಯರ್ ಬಾಟಲ್‌ನಿಂದ ಬಲವಾಗಿ ಚುಚ್ಚಿದ್ದಾರೆ. ಮಂಜು ಕಾಶಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.