ಮಂಡ್ಯದಲ್ಲಿ ಆಯೋಜಿಸಿದ್ದ ಸಂಗೀತ ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ 179ನೇ ವರ್ಷದ ಆರಾಧನೆಯಲ್ಲಿ ಹಿರಿಯ ಗಾಯಕ ಕರ್ನಾಟಕ ಕಲಾಶ್ರೀ ವಿದ್ಯಾಶಂಕರ್ ಗಾಯನ ನಡೆಸಿಕೊಟ್ಟರು. 
ಮಂಡ್ಯ

ನಗರದಲ್ಲಿ ವೈಭವದ ತ್ಯಾಗರಾಜ ಆರಾಧನೆ: ಸಂಗೀತ ಸೇವೆ, ಗೋಷ್ಠಿ, ಗಾಯನ

ಪ್ರಮುಖ ಮುಖ್ಯಾಂಶಗಳು

  • ಶ್ರೀ ತ್ಯಾಗರಾಜ ಸ್ವಾಮಿಗಳ 179ನೇ ವರ್ಷದ ಆರಾಧನೆ
  • ಶ್ರದ್ಧಾ ಭಕ್ತಿಯಿಂದ ಆಚರಣೆ
  • ಪಂಚಾವರತ್ನ ಕೃತಿಗಳ ಗೋಷ್ಠಿ ಗಾಯನದೊಡನೆ ಸಂಗೀತ ಕಾರ್ಯಕ್ರಮ ಸಂಪನ್ನ
ಮಂಡ್ಯ: ಸಂಗೀತ ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ 179ನೇ ವರ್ಷದ ಆರಾಧನೆಯನ್ನು ನಗರದ ಉದ್ಯಮಿ ಹರಿಪ್ರಸಾದ್ ನಿವಾಸದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕೊಡಿಯಾಲ ಸಾಹುಕಾರರೆಂದೆ ಖ್ಯಾತರಾಗಿರುವ ಸಂಗೀತ ಆರಾಧಕ ಕಲಾವಿದ ದಾಸರಾಜು ಅವರ ಪುತ್ರ ಹರಿಪ್ರಸಾದ್ ಕುಟುಂಬ ವರ್ಗದವರು ಸತತವಾಗಿ 60 ವರ್ಷದಿಂದ ನಿರಂತರವಾಗಿ ತ್ಯಾಗರಾಜ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ತ್ಯಾಗರಾಜರ ಭಾವ ಚಿತ್ರದ ಉತ್ಸವದಿಂದ ಆರಂಭವಾದ ಸಂಗೀತ ಸೇವೆ ಜಿಲ್ಲಾ ಹಾಗೂ ಪರ ಜಿಲ್ಲೆಗಳಾದ ಮೈಸೂರು, ಹಾಸನ, ಆಂಧ್ರದ ವಿಜಯವಾಡದ ಹಿರಿಯ, ಕಿರಿಯ ಕಲಾವಿದರು, ವಾದ್ಯ ಕಲಾವಿದರಿಂದ ಪ್ರದರ್ಶನ ಆರಾಧನೆಗೆ ಹೆಚ್ಚಿನ ಸೊಬಗು ಬಂದಿತ್ತು. ಬೆಳಗ್ಗೆಯ ಕಾರ್ಯಕ್ರಮದಲ್ಲಿ ಕೊಡಿಯಾಲದ ವಿದ್ವಾನ್ ಕೃಷ್ಣಮೂರ್ತಿ ತಂಡದ ನಾದ ಸ್ವರ, ವಿಜಯವಾಡ ರವಿ ತೇಜಸ್ ಅವರ ಸ್ಯಾಕ್ಸೋಫೋನ್ ವಾದನ ಎಲ್ಲರನ್ನು ಮುದಗೊಳಿಸಿತು.
ಹಿರಿಯ ಗಾಯಕ ಕರ್ನಾಟಕ ಕಲಾಶ್ರೀ ವಿದ್ಯಾಶಂಕರ್ ಅವರ ಶ್ರೇಷ್ಠ ಗಾಯನ ಎಲ್ಲರಲ್ಲಿ ರೋಮಾಂಚನಗೊಳಿಸಿದರೆ, ವಿದ್ವಾನ್ ಸತೀಶ್‌ಕುಮಾರ್, ಯುವ ಗಾಯಕರಾದ ಅನಿರುದ್ಧ ಭಟ್, ಸುಹಾಸ್ ಕೌಶಿಕ್, ಲಕ್ಷ್ಮೀ, ರಾಧಿಕಾರಾವ್, ನಾಯ್ದು, ಸೌಮ್ಯಾ ಪ್ರಸಾದ್, ಪ್ರಾರ್ಥನಾ ದ್ವಂದ್ವ ಗಾಯನ, ವಿದುಷಿ ಶಾರದಾ ನಿಂಗೇಗೌಡ ಗಾಯನ, ಕಿರಿಯ ಕಲಾವಿದರಿಂದ ಗಾಯನ ಎಲ್ಲರನ್ನು ರಂಜಿಸಿತು. ಬಾಲ ಪ್ರತಿಭೆ ನಿಹಾನ್ ತಬಲವಾದನ, ಕುಮಾರಿ ಆದ್ಯಾ ಭರತನಾಟ್ಯ ಪ್ರದರ್ಶನದಿಂದ ತ್ಯಾಗರಾಜ ಆರಾಧನೆಗೆ ಹೆಚ್ಚಿನ ಕಳೆ ಬಂದಿತು. ಪಂಚಾವರತ್ನ ಕೃತಿಗಳ ಗೋಷ್ಠಿ ಗಾಯನದೊಡನೆ ಸಂಗೀತ ಕಾರ್ಯಕ್ರಮ ಸಂಪನ್ನಗೊಂಡಿತು.
ವಾದ್ಯ ಸಹಕಾರದಲ್ಲಿ ಸುಬ್ಬಲಕ್ಷ್ಮೀ, ಗುರುಮೂರ್ತಿ, ಮೃದಂಗದಲ್ಲಿ ಹಿರಿಯ ಕಲಾವಿದ ಎಸ್. ಸುದರ್ಶನ್, ಖಂಜರ ಮಂಜುನಾಥ್ ಇದ್ದರು. ಸಂಜೆ ಬೆಂಗಳೂರಿನ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ವಿನಾಯಕ ಶರ್ವ ಅವರಿಂದ ವಿದ್ವತ್ ಪೂರ್ಣ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.