ಮಂಡ್ಯ ತಾಲೂಕು ಸಂತೆಕಸಲಗೆರೆ ಗ್ರಾಮದಲ್ಲಿ ವಿಶ್ವ ಓಜೋನ್‌ದಿನದ ಅಂಗವಾಗಿ ಮಕ್ಕಳಿಗೆ ಸಸಿ ವಿತರಣೆ ಮಾಡಲಾಯಿತು.  
ಮಂಡ್ಯ

ಗಿಡ ಬೆಳೆಸಿ ಪ್ರಕೃತಿ ಅಸಮತೋಲನ ತಪ್ಪಿಸಿ: ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಲೋಕೇಶ್ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸಂತೆಕಸಲಗೆರೆಯಲ್ಲಿ ವಿಶ್ವ ಓಜೋನ್ ದಿನಾಚರಣೆ
  • ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಯೋಜನೆ
ಮಂಡ್ಯ: ಪ್ರಕೃತಿ ಅಸಮತೋಲನವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಬೇಕು ಎಂದು ಸಂತೆಕಸಲಗೆರೆ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಲೋಕೇಶ್ ತಿಳಿಸಿದರು.
ತಾಲೂಕಿನ ಸಂತೆಕಲಸಗೆರೆ ಶಾಲಾ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ವಿಶ್ವ ಓಜೋನ್‌ದಿನದ ಅಂಗವಾಗಿ ಆಯೋಜಿಸಿದ್ದ ಅರಣ್ಯ ಸಾಕ್ಷರತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಪಮಾನ ಹೆಚ್ಚಳದಿಂದ ಪ್ರಕೃತಿಯಲ್ಲಿ ಹಲವು ಅವಘಡಗಳು ಕಂಡುಬರುತ್ತದೆ. ನಿರ್ದಿಷ್ಟ ಮಳೆ ಬಾರದೆ ಸಸ್ಯ ಸಂಕುಲ ವಿನಾಶದ ಅಂಚಿಗೆ ಬಂದಿವೆ. ಮನುಷ್ಯನ ದುರಾಸೆಯ ಮನಸ್ಥಿತಿಯಿಂದ ಹೊರಬಂದು ಹಿಂದಿನ ಜನರು ಅನುಸರಿಸಿಕೊಂಡು ಬಂದಂತಹ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದರು.
ಇಂಗಾಲದ ಡೈ ಆಕ್ಸೈಡ್‌ನಿಂದಾಗಿ ಓಜೋನ್ ಪದರಕ್ಕೆ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ದಿನನಿತ್ಯದ ಬಳಕೆಯಲ್ಲಿ ರೆಫ್ರಿಜರೇಟರ್, ಎಸಿಯಂತಹ ವಸ್ತುಗಳ ಬಳಕೆಯನ್ನು ತಡೆಗಟ್ಟಬೇಕು. ಇವುಗಳ ಬಳಕೆಯಿಂದಾಗಿ ಸಾಕಷ್ಟು ಹಾನಿಯಾಗುತ್ತದೆ. ದೈನಂದಿನ ಬದುಕಿನಲ್ಲಿ ಬಟ್ಟೆ ಬ್ಯಾಗ್‌ಗಳು, ಹಸಿರು ಗೊಬ್ಬರ ಸೇರಿದಂತೆ ಪರಿಸರ ಪೂರಕ ವಸ್ತುಗಳನ್ನು ಬಳಕೆ ಮಾಡುವುದು ಅತ್ಯಾವಶಕ್ಯ. ಶಾಲಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಬೇಕು. ಪ್ಲಾಸ್ಟಿಕ್‌ನಿಂದ ಹಲವಾರು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಮನುಕುಲ ಸಂರಕ್ಷಣೆಯ ಮಹತ್ವವನ್ನು ಅರ್ಥೈಸಿಕೊಂಡು ಪ್ರಕೃತಿಯ ಸಂರಕ್ಷಣೆಗೆ ವಿಶೇಷ ಆಸಕ್ತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ರಶ್ಮಿ ಮಾತನಾಡಿ, ನೀರು ಮತ್ತು ಗಾಳಿ, ಮಣ್ಣು, ನೈರ್ಮಲ್ಯದ ಕಡೆಗೆ ವಿಶೇಷವಾದ ಕಾಳಜಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಓಜೋನ್ ಪದರ ಕ್ಷೀಣಿಸುವಿಕೆಯಿಂದ ಜಗತ್ತು ಹಲವಾರು ಸಂಕೀರ್ಣತೆಯನ್ನು ಎದುರಿಸಬೇಕಾಗಿದೆ. ಅತಿಯಾದ ತಾಪಮಾನದಿಂದ ಈಗಾಗಲೇ ಹಲವು ರೀತಿಯ ಸಮಸ್ಯೆಗಳು ವಿಶ್ವವನ್ನು ಕಾಡುತ್ತಿವೆ. ವಿಶ್ವ ಸಂಸ್ಥೆಯು ಇದನ್ನು ಮನಗಂಡು ಓಜೋನ್ ಪದರದ ಮಹತ್ವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಶೇ.30ರಷ್ಟು ಅರಣ್ಯ ಪ್ರದೇಶದ ಅಗತ್ಯವಿದೆ. ಅತಿ ಹೆಚ್ಚು ಅರಣ್ಯವನ್ನು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಪರಿಸರ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳ ಮೂಲಕ ಅರಣ್ಯ ಸಾಕ್ಷರತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ವಿದ್ಯಾರ್ಥಿಗೆ ಎರಡು ಗಿಡ ನೆಡುವುದರ ಮೂಲಕ ಸಸ್ಯ ಸಂರಕ್ಷಣೆಗೆ ಆಸಕ್ತಿ ಬೆಳೆಸಿದಂತಾಗುತ್ತದೆ. ಗ್ರಾಮದಲ್ಲಿನ ಸರ್ಕಾರಿ ಜಾಗಗಳು, ಗೋ ಗುಂಟೆ, ನೆಡುತೋಪು ಅಥವಾ ಸ್ವ ಜಮೀನುಗಳಲ್ಲಿ ಗಿಡ ಬೆಳೆಸಬೇಕು. ನಮ್ಮ ರೈತರು ನಾವೇ ಮತ್ತು ರಸ್ತೆ ಬದಿಯಲ್ಲಿ ಬೆಳೆ ಬರುವುದಿಲ್ಲವೆಂಬ ಅವೈಜ್ಞಾನಿಕ ಮನಸ್ಸಿನಿಂದ ಅತಿ ಹೆಚ್ಚು ಗಿಡ ಮರಗಳು ಕಂಡುಬರುವುದಿಲ್ಲ. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಗಿಡ ಬೆಳೆಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಸೀರ್ ಹುಸೇನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಸಂತೆಕಸಲಗೆರೆ ಬಸವರಾಜು ಪರಿಸರ ಗೀತೆಗಳನ್ನು ಸಾದರಪಡಿಸಿದರು. 500ಕ್ಕೂ ಹೆಚ್ಚು ವಿವಿಧ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.