ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿನ್ನಲೆ ಗಾಯಕಿ ಸುನೀತಾ ಅವರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿ ನೀಡಿ ದಂಪತಿಯನ್ನು ಗೌರವಿಸಲಾಯಿತು. 
ಮಂಡ್ಯ

ಗಾಯಕರ ಗಾಯನಕ್ಕೆ ಮನಸೋತ ಜನ: ನಗರದಲ್ಲಿ ಎಸ್‌ಬಿಪಿ ಸ್ವರ ಸಂಚಾರ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಆಯೋಜನೆ
  • ನಗರದ ಶಿವನಂಜಪ್ಪ ಉದ್ಯಾನ(ದೇವರಕಾಡು)ದಲ್ಲಿ ಆಚರಣೆ
ಮಂಡ್ಯ: ವಿಶ್ವ ಸಂಗೀತ ದಿನಾಚರಣೆ ಹಾಗೂ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರ ಜನ್ಮದಿನದ ಅಂಗವಾಗಿ ನಗರದ ಶಿವನಂಜಪ್ಪ ಉದ್ಯಾನ(ದೇವರಕಾಡು)ದಲ್ಲಿ ಆಯೋಜಿಸಿದ್ದ ಗಾಯನ ಕಾರ್ಯಕ್ರಮಕ್ಕೆ ಜನರು ಮನಸೋತರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಗೀತ ಸಂಗೀತ ಎಸ್‌ಪಿಬಿ ಸ್ವರ ಸಂಚಾರ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಗಾಯಕರ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ಡೇವಿಡ್ ಪ್ರತಿಭಾಂಜಲಿ, ಹಂಸಾ, ಶಂಕರ್, ಪ್ರಸನ್ನ, ಡಾ. ವರ್ಷ ಹೂಗಾರ್, ಡಾ.ಸುಭಾಷ್, ವಿಶ್ವಾಸ್, ಮೋಹನ್ ರಾಗಿಮುದ್ದನಹಳ್ಳಿ, ಹೃಷಿಕೇಶ ಅವರ ಗೀತೆ ಗಾಯನ ಜನರನ್ನು ಸೆಳೆಯಿತು. ಇದಕ್ಕೆಲ್ಲ ಕಳಸವಿಟ್ಟಂತೆ ಜೋಗಿ ಸಿನಿಮಾ ಖ್ಯಾತಿಯ ಸುನೀತಾ ಅವರ ಗಾಯನ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಸಂಗೀತ ಮತ್ತು ಆರೋಗ್ಯ ಒಂದು ಮಿಶ್ರಣವಿದ್ದಂತೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಗೀತದ ರಾಗಗಳಿಂದ ಗುಣಪಡಿಸುವ ಥೆರಪಿಗಳಿವೆ ಎಂದರು.
ವೈದ್ಯ ಹಾಗೂ ಸಾಹಿತಿ ಡಾ.ಕೆ.ಚಂದ್ರಶೇಖರ್ ಮಾತನಾಡಿ, ಸಂಗೀತದ ಮೂಲಕ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವಂತಹ ಶಿಬಿರಗಳು ಕೂಡ ನಡೆಯುತ್ತಿವೆ. ಸಂಗೀತಕ್ಕೆ ಮನಸೋಲದವರಿಲ್ಲ, ಸಂಗೀತದಿಂದ ಮಾನಸಿಕ ನೆಮ್ಮದಿ ಆರೋಗ್ಯ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿನ ಒತ್ತಡದ ಬದುಕಿನ ನೋವಿಗೆ ಸಮಾಧಾನ ಮತ್ತು ಮನೋಚಿಕಿತ್ಸೆಗೆ ಸಂಗೀತ ಔಷಧ. ವೈದ್ಯಲೋಕ ಮತ್ತು ಆರೋಗ್ಯತಜ್ಞರ ಪ್ರಕಾರ ಸಂಗೀತ ಕೇಳುವುದು ಮತ್ತು ಕೇಳಿಸಿಕೊಳ್ಳುವುದು ಚಿಕಿತ್ಸೆಯಾಗಿದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ವಿ.ಭೈರಿ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಪ್ರತಿಭಾಂಜಲಿ ಡೇವಿಡ್ ಇತರರಿದ್ದರು. ಇದೇ ಸಂದರ್ಭದಲ್ಲಿ ಹಿನ್ನಲೆ ಗಾಯಕಿ ಸುನೀತಾ ಅವರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.