ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಗಿಡ ನೆಟ್ಟು ನೀರೆರೆದರು.
- ವಿ.ಸಿ ಫಾರ್ಮ್‌ನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ತಾಯಂದಿರ ದಿನಾಚರಣೆ
- ಗಿಡ ನೆಟ್ಟು ನೀರೆರೆದು ಆಚರಣೆ
ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಗಿಡ ನೆಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ, ಇತ್ತೀಚಿನ ದಿನಗಳಲ್ಲಿ ವೇಗವಾಗಿ ನಡೆಯುತ್ತಿರುವ ನಗರೀಕರಣ, ರಸ್ತೆ ವಿಸ್ತರಣೆ ಹಾಗೂ ಕೈಗಾರಿಕೆಗಳ ವಿಸ್ತರಣೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಪರಿಸರದ ಆರೋಗ್ಯ ಮತ್ತು ಸುಸ್ಥಿರತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಹಸಿರು ಉಪಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಗಿಡ ನೆಡುವುದು ಕೇವಲ ಕಾರ್ಯಕ್ರಮವಲ್ಲ. ಅದು ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಹಸಿರಿನ ಪರಿಸರವನ್ನು ಉಳಿಸುವ ಹೊಣೆಗಾರಿಕೆಯಾಗಿದೆ. ತಾಯಂದಿರ ದಿನದಂತಹ ವಿಶೇಷ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಅಂತೆಯೇ ತಂದೆ, ತಾಯಿಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ವಿವಿಯ ಶಿಕ್ಷಣ ನಿರ್ದೇಶಕ ಡಾ.ಎಸ್.ಶಿವಕುಮಾರ್, ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ, ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್.ಬಸವರಾಜು, ಹಿರಿಯ ಕ್ಷೇತ್ರ ಅಧ್ಯಕ್ಷ ಡಾ.ತಿಮ್ಮೇಗೌಡ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ವಿ.ಸಿ. ಫಾರ್ಮ್ ರಸ್ತೆಗಳ ಬದಿಯಲ್ಲಿ ಸುಮಾರು 650 ಗಿಡಗಳನ್ನು ನೆಡಲಾಯಿತು. ಈ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಹಸಿರು ಅಭಿಯಾನವಾಗಿ ಯಶಸ್ವಿಯಾಗಿ ನಡೆಯಿತು.