ಮಂಡ್ಯ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ವಿಶ್ವ ಹಾಲು ದಿನವನ್ನು ಆಚರಿಸಲಾಯಿತು.
- ಮಿಮ್ಸ್‌ನಲ್ಲಿ ರೋಗಿಗಳಿಗೆ ಹಾಲಿನ ಉತ್ಪನ್ನಗಳ ವಿತರಣೆ
- ಮನ್‌ಮುಲ್ ನಿಂದ ಆಯೋಜನೆ
ಮಂಡ್ಯ: ಹಲವು ಪೋಷಕಾಂಶಗಳನ್ನೊಳಗೊಂಡಿರುವ ಹಾಲು ಅಮೃತಕ್ಕೆ ಸಮಾನ ಎಂದು ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್(ಶಿವಪ್ಪ) ಹೇಳಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮನ್‌ಮುಲ್‌ನಿಂದ ನಗರದ ಮಿಮ್ಸ್‌ನಲ್ಲಿ ರೋಗಿಗಳಿಗೆ ಹಾಲಿನ ಉತ್ಪನ್ನ ವಿತರಿಸಿ ಮಾತನಾಡಿದ ಅವರು, ಮನುಷ್ಯನ ದೇಹಕ್ಕೆ ಬೇಕಾದ ಎಲ್ಲ ರೀತಿಯ ಗುಣಮಟ್ಟದ ಅಂಶವನ್ನು ಹಾಲು ಒಳಗೊಂಡಿರುತ್ತದೆ. ಮನುಷ್ಯನ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಿಕೊಡುತ್ತದೆ ಎಂದರು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ ಹಾಗೂ ಪೌಷ್ಠಿಕಾಂಶದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ವಿಶ್ವದಾದ್ಯಂತ ಜೂ.1ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ. ಅದರಂತೆ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಿಸಲಾಗುತ್ತಿದೆ. ಅಂತೆಯೇ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು ಮಾತನಾಡಿದರು. ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಮನ್‌ಮುಲ್ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶ್ರೀಕಾಂತ್, ಸಹಾಯಕ ವ್ಯವಸ್ಥಾಪಕ ಸಿ.ಎನ್.ಸಾಗರ್, ನಂದೀಶ್, ನವೀನ್, ಬಸವರಾಜು, ಸಂತೋಷ್ ಇತರರಿದ್ದರು.