ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಡ್ಯ ತಾಲೂಕು ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿವಿಧ ಸಸಿ ನೆಟ್ಟು ನೀರೆರೆಯಲಾಯಿತು. 
ಮಂಡ್ಯ

ಹವಾಮಾನ ವೈಪರೀತ್ಯವೆದರಿಸಲು ಪರಿಸರವೇ ಮಾರ್ಗ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಮನುಷ್ಯ ಪ್ರಕೃತಿಯನ್ನು ಕೇವಲ ಸಂಪನ್ಮೂಲವಾಗಿ ನೋಡದೆ, ಹವಾಮಾನ ವೈಪರಿತ್ಯದ ಬಿಕ್ಕಟ್ಟನ್ನು ಎದುರಿಸಲು ಪ್ರಕೃತಿಯೇ ನಮಗೆ ಶಾಶ್ವತ ಮಾರ್ಗ ಹಾಗೂ ಪಾಲುದಾರ ಎಂದು ತಿಳಿಯಬೇಕಿದೆ. ಪ್ರಕೃತಿ ನಾಶದಿಂದ ಹವಮಾನ ವೈಪರೀತ್ಯ ಉಲ್ಬಣವಾಗುತ್ತಿದೆ. ಪರಿಣಾಮ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸೃಷ್ಠಿಯಾಗುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಎಚ್ಚರಿಸಿದರು.

ತಾಲೂಕಿನ ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದ ಕೈತೋಟದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿವಿಧ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಹೆಚ್ಚಾಗಿ ಮರಳುಗಾಡಿನಲ್ಲೂ ಮಳೆ, ಮಳೆಪ್ರದೇಶದಲ್ಲಿ ಬರಗಾಲ ಉಂಟಾಗುತ್ತಿದೆ ಎಂದರು.
ಹವಾಮಾನ ಬದಲಾವಣೆಯ ತುರ್ತು ಪರಿಸ್ಥಿತಿಯನ್ನು ಮನುಷ್ಯ ಸೇರಿದಂತೆ ಇಂದಿನ ಜೀವಸಂಕುಲಗಳು ಎದುರಿಸುತ್ತಿವೆ. ಭೂಮಿಯ ತಾಪಮಾನ ಏರಿಕೆಯಾಗುತ್ತಿದ್ದು, ಅತಿಯಾದ ಉಷ್ಣಾಂಶ, ಏರುತ್ತಿರುವ ಸಮುದ್ರ ಮಟ್ಟ ಹಾಗೂ ಮಳೆಯ ವ್ಯತ್ಯಾಸಗಳು ಮಾನವಕುಲಕ್ಕೆ ಎಚ್ಚರಿಕೆಯ ಗಂಟೆಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯರೆಲ್ಲರೂ ಸಾಮೂಹಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಮತ್ತು ಹವಾಮಾನವನ್ನು ಕೊಡುಗೆಯಾಗಿ ನೀಡಬೇಕಿದೆ. ಜೀವಸಂಕುಲಗಳ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಮಾನವೀಯತೆ ಇಲ್ಲದಿದ್ದರೆ ಉಳಿಗಾಲವಿಲ್ಲ. ರೆಡ್‌ಕ್ರಾಸ್ ಸಂಸ್ಥೆಯು ಮಾನವೀಯತೆ ಜತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡುತ್ತಿದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದು. ಮಣ್ಣು ಮತ್ತು ನೀರನ್ನು ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮುಂದಿನ ಹೆಜ್ಜೆಗಳು ಪರಿಸರ ನಾಶದಿಂದ ಉಂಟಾಗುವ ದುರಂತಗಳನ್ನು ತಡೆಯಲು ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ಮರಗಳ ಉಳಿವು ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯಿಂದ ಮಾತ್ರ ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕಿ ಕೆ.ಎಂ.ಪವಿತ್ರಾ, ಶಿಕ್ಷಕಿಯರಾದ ರೇಣುಕಾ, ಶಿವಕುಮಾರಿ, ಜ್ಯೋತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚನ್ನಯ್ಯ, ಮಾಜಿ ಅಧ್ಯಕ್ಷ ಉಮೇಶ್, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ಡಾ.ಶಿವಕುಮಾರ್, ಷಡಕ್ಷರಿ, ಡಾ.ಮಹೇಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ರಾಮು, ಜಗದೀಶ್ ಇತರರಿದ್ದರು.