ಮದ್ದೂರು ಪಟ್ಟಣದ ಎಚ್.ಕೆ.ವಿ ಕಾಲೇಜಿನಲ್ಲಿ ನಡೆದ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀನಿವಾಸ್ ಚಾಲನೆ ನೀಡಿದರು. ಬಿ.ಡಿ.ಹೊನ್ನೇಗೌಡ, ರಜಿನಿರಾಜ್, ಹಾಲಪ್ಪ, ಎಚ್.ಬಿ.ಸ್ವಾಮಿ, ಸಿ.ಜಿ.ಗೌರಿಶಂಕರ್, ಮಹಾಂತೇಶ್ ಹಿರೇಮಠ್ ಇದ್ದರು.
ಮದ್ದೂರು: ರೋಟರಿ ಸಂಸ್ಥೆಯು ದೇಶದಾದ್ಯಂತ ಪೋಲಿಯೋ ನಿರ್ಮೂಲನೆಗಾಗಿ ಪಣ ತೊಡುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿ ಅಂಗ ವೈಕಲ್ಯ ತಡೆಯಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ನಗರದ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, ಸಮುದಾಯ ಆಧಾರಿತ ವಿಕಲಚೇತನರ ಪುನರ್‌ವಸತಿ ಯೋಜನೆ ವತಿಯಿಂದ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಗವೈಕಲ್ಯವನ್ನು ಶಾಪವೆಂದು ಅಂದುಕೊಳ್ಳದೆ ಆತ್ಮವಿಶ್ವಾಸದಿಂದ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು. ಅಂಗವಿಕಲ ಮಹಿಳೆಯೊಬ್ಬಳು ಮೌಂಟ್ ಎವರೆಸ್ಟ್ ಶಿಖರ ಏರಿದ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅವರಂತೆಯೇ ನೀವು ಸಾಧನೆ ಮಾಡುವತ್ತ ಮುಖ ಮಾಡಬೇಕೆಂದು ಹೇಳಿದರು.
ಆತ್ಮಶಕ್ತಿ, ಇಚ್ಛಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅಂಗವಿಕಲರು ರಾಜಕೀಯ, ಸಿನಿಮಾ, ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವ ಉದಾಹರಣೆಗಳು ಸಾಕಷ್ಟಿದೆ. ಅಂಗವಿಕಲರಿಗೆ ಅನುಕಂಪ ತೋರಿಸದೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಮೂಲಕ ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದರು.
ಎಚ್.ಕೆ.ವಿ ಕಾಲೇಜಿನ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರ ಜತೆಗೆ ಸಂಘ ಸಂಸ್ಥೆಗಳು ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿದೆ. ಇವುಗಳ ಸದ್ಬಳಕೆಗೆ ಮುಂದಾಗುವ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕು. ಅಂಗವಿಕಲತೆ ದೌರ್ಬಲ್ಯ ಎಂದುಕೊಳ್ಳದೆ ಸಮಾಜದ ಮುಖ್ಯ ವಾಹಿನಿಗೆ ಬರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು.
ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾಗ್ಯಾ, ಪ್ರಕೃತಿ, ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಅಗತ್ಯವುಳ್ಳ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ರೋಟರಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಬಿ.ಡಿ.ಹೊನ್ನೇಗೌಡ, ಲಯನ್ಸ್ ಸಂಸ್ಥೆ ಅಧ್ಯಕ್ಷೆ ರಜಿನಿರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಹಾಲಪ್ಪ, ಜಗಜ್ಯೋತಿ ಬಸವೇಶ್ವರ ಪತ್ತಿನ ಸಂಘದ ಅಧ್ಯಕ್ಷ ಎಚ್.ಬಿ.ಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಜಿ.ಗೌರಿಶಂಕರ್, ವಿವಿಧ ಸೇವಾ ಸಮಾಜದ ಅಧ್ಯಕ್ಷ ಸಿ.ಮಹೇಶ್, ಸಂಯೋಜಕಿ ಕೆ.ಬಿ.ಜಯಂತಿ, ರಮಣ ಮಹರ್ಷಿ ಅಕಾಡೆಮಿ ನಿರ್ದೇಶಕ ಮಹಾಂತೇಶ್ ಹಿರೇಮಠ್ ಇತರರಿದ್ದರು.