ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಕುಂದು-ಕೊರತೆ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಎ.ಎಸ್.ರಾಜೀವ್, ಹರೀಶ್ ಬಾಬು, ಕೆ.ಶೆಟ್ಟಹಳ್ಳಿ ರಘು, ಕರಡಕೆರೆ ಮೊಳ್ಳೆನಿಂಗೇಗೌಡ, ಬೋರೇಗೌಡ, ಚಿಕ್ಕ ಹನುಮೇಗೌಡ, ಯಡಗನಹಳ್ಳಿ ಕೆಂಚೇಗೌಡ ಇದ್ದರು.
ಕಾಂಗ್ರೆಸ್‌ಗೆ ಮುಖಂಡರು, ಕಾರ್ಯಕರ್ತರೇ ದೊಡ್ಡ ಶಕ್ತಿ. ತಾಳ್ಮೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರಕುತ್ತವೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಕೆ.ಎಂ.ದೊಡ್ಡಿ ಸಮೀಪದ ಕಾಡುಕೊತ್ತನಹಳ್ಳಿ, ಕೆ.ಶೆಟ್ಟಹಳ್ಳಿ, ಯಡಗನಹಳ್ಳಿ ಗ್ರಾಮಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕಾಂಗ್ರೆಸ್ ಬೂತ್‌ಮಟ್ಟದ ಕಾರ್ಯಕರ್ತರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು. ಸ್ಥಳೀಯವಾಗಿ ಕಾರ್ಯಕರ್ತರು ಬಲಿಷ್ಠರಾದರೆ ಪಕ್ಷ ಸಂಘಟನೆಗೊಳ್ಳುತ್ತದೆ. ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟನೆಯಲ್ಲಿ ತೊಡಗಬೇಕು. ರಾಜಕೀಯವಾಗಿ ಗ್ರಾಮಗಳ ಅಭಿವೃದ್ಧಿಗೆ ಸಲಹೆ ನೀಡಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಸುವ ನಿಟ್ಟಿನಲ್ಲಿ ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಕುಂದು ಕೊರತೆ ಆಲಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕರ್ತರು ಹಾಗೂ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಮುಂಬರುವ ಗ್ರಾಪಂ, ತಾಪಂ, ಜಿಪಂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು ಎಂದರು.
ಪಕ್ಷ ಸಂಘಟಿಸಲು ಪ್ರತಿ ಗ್ರಾಮದಲ್ಲಿ 20 ಸದಸ್ಯರ ಬೂತ್ ಸಮಿತಿ ಹಾಗೂ 34 ಪ್ರಮುಖ ಮುಖಂಡರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚಿಸಿ ನಮ್ಮ ಗಮನಕ್ಕೆ ತಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಪ್ರತಿ ಗ್ರಾಪಂಮಟ್ಟದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಯುವಕರ ಸಂಘ ತೆರೆದು ಸರ್ಕಾರ ನೀಡುವ 10 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಂಡು ಯುವಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ಶೀಘ್ರ ಹೊರಡಿಸಿ ಸಂಘದ ಕುರಿತು ಅಗತ್ಯ ಮಾಹಿತಿ ನೀಡುವಂತೆ ಪಿಡಿಒಗಳಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ ಮಾತನಾಡಿ, ಶಾಸಕರು ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಎರಡು ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಸರ್ವತೋಮುಖ ಪ್ರಗತಿಗೆ ನಾಂದಿ ಹಾಡಿದ್ದಾರೆ ಎಂದು ಶ್ಲಾಘಿಸಿದರು.
ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲಾಯಿತು. ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಕೆ.ಶೆಟ್ಟಹಳ್ಳಿ ರಘು, ಕರಡಕೆರೆ ಮೊಳ್ಳೆನಿಂಗೇಗೌಡ, ಬೋರೇಗೌಡ, ಚಿಕ್ಕ ಹನುಮೇಗೌಡ, ಯಡಗನಹಳ್ಳಿ ಕೆಂಚೇಗೌಡ, ಮನು, ಮಧು, ಕೃಷ್ಣ, ಕಾಡುಕೊತ್ತನಹಳ್ಳಿ ಗ್ರಾಮದ ಮಾದೇಗೌಡ, ಕಪನಿಗೌಡ, ದಯಾನಂದ, ಚಿದಂಬರಮೂರ್ತಿ, ಚಿಕ್ಕಲಿಂಗ, ವೀರಭದ್ರ, ರುದ್ರಯ್ಯ ಇದ್ದರು.