ಮಂಡ್ಯ ನಗರದ ಜಿಪಂ ಕಚೇರಿ ಎದುರು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. 
ಮಂಡ್ಯ

ಕೃಷಿ, ಗ್ರಾಮೀಣ ಕಾರ್ಮಿಕರ್ತರ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ನೂರು ದಿನ ಕೆಲಸ ಕೊಡದ ಕುಟುಂಬಕ್ಕೆ ನಿರುದ್ಯೋಗ ಭತ್ಯೆ ಕೊಡಬೇಕೆಂದು ಆಗ್ರಹ
ಮಂಡ್ಯ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೂರು ದಿನ ಕೆಲಸ ಕೊಡದ ಕುಟುಂಬಕ್ಕೆ ನಿರುದ್ಯೋಗ ಭತ್ಯೆ ಕೊಡುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿದರು.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು, ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು. ಅಂತೆಯೇ ಕೇಂದ್ರ ಸರ್ಕಾರದ ವಿಬಿಜಿ ರಾಮ್‌ಜಿ ಯೋಜನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧೀಜಿ ಹೆಸರು ಅಳಿಸಿ ಕೂಲಿಕಾರರ ಹಕ್ಕನ್ನು ಕಸಿಯಲಾಗುತ್ತಿದೆ. ಆದ್ದರಿಂದ ವಿಬಿಜಿ ರಾಮ್‌ಜಿ ಯೋಜನೆ ತೊಲಗಿಸಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ಕೂಲಿ, ಪ್ರೋತ್ಸಾಹ ಧನ ನೀಡಿ ಕೂಡಲೇ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ನೂರು ದಿನ ಕೆಲಸ ಕೊಡದ ಕುಟುಂಬಕ್ಕೆ ನಿರುದ್ಯೋಗ ಭತ್ಯೆ ನೀಡಬೇಕು. ಹಲವು ಗ್ರಾ.ಪಂ.ಗಳಲ್ಲಿ ಎನ್‌ಎಂಆರ್ ಸೃಜಿಸಿ ಕೆಲಸ ಕೊಡಬೇಕು. ಬಾಕಿ ಕೂಲಿ ಹಣ ಫಲಾನುಭವಿಗಳು ಹಾಗೂ ಕೂಲಿಕಾರರ ಖಾತೆಗೆ ಜಮೆ ಮಾಡಬೇಕು. ಎನ್‌ಎಂಎಂಎನ್ ಹಾಜರಾತಿ ಕೈಬಿಡಬೇಕು. ಬೆಸಗರಹಳ್ಳಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ದಲಿತರು, ಹಿಂದುಳಿದವರಿಗೆ ಹಕ್ಕುಪತ್ರ ನೀಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಇಲ್ಲದಂತೆ ನೋಡಿಕೊಳ್ಳಬೇಕು. ಆರ್‌ಬಿಐ ನಿರ್ದೇಶನದಂತೆ ಕೂಲಿಕಾರರಿಗೆ 2 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ ನೀಡಬೇಕು. ಗ್ರಾಮಗಳ ಹದಗೆಟ್ಟ ರಸ್ತೆಗಳ ದುರಸ್ಥಿ ಮಾಡಬೇಕು. ಜಿಲ್ಲಾದ್ಯಂತ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ, ಸಹ ಕಾರ್ಯದರ್ಶಿ ಕೆ.ಎಚ್.ಪುಟ್ಟಮಾದಯ್ಯ, ಲಕ್ಷ್ಮೀ ಕುಂತೂರು, ಸರೋಜಮ್ಮ, ಮಂಜುಳಾ, ಟಿ.ಪಿ.ಅರುಣ್‌ಕುಮಾರ್, ಅಮಾಸಯ್ಯ, ಎನ್.ಸುರೇಂದ್ರ, ಜಿ.ಎಚ್.ಗಿರೀಶ್, ಶಾಂತಮ್ಮ ಇತರರಿದ್ದರು.