ಮಂಡ್ಯದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ
- ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ
ಮಂಡ್ಯ: ನಗರದ ಗುತ್ತಲು-ಯತ್ತಗದಹಳ್ಳಿ ಕೆರೆಗೆ ತ್ಯಾಜ್ಯ ನೀರು ಸೇರುವುದನ್ನು ತಡೆಗಟ್ಟಲು ನಿರ್ಮಿಸುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ ಕಾಮಗಾರಿಗಳನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗುತ್ತಲು ಮತ್ತು ಚಿಕ್ಕೇಗೌಡನದೊಡ್ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ ಕಾಮಗಾರಿ ಹಾಗೂ ನಗರದಲ್ಲಿ ಬಿಟ್ಟು ಹೋಗಿರುವ ಒಳಚರಂಡಿ ಪೈಪ್‌ಲೈನ್ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳಿಗೆ ನಗರದ ತ್ಯಾಜ್ಯ ನೀರು ಸೇರುತ್ತಿದ್ದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸುವ ಜತೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಯ ಜತೆಗೆ ಕೆರೆಗೆ ತ್ಯಾಜ್ಯ ನೀರು ಸೇರುವುದನ್ನು ತಡೆಯಲು ಗುತ್ತಲು, ಚಿಕ್ಕೇಗೌಡನದೊಡ್ಡಿ ಬಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಗುತ್ತಲು-ಯತ್ತಗದಹಳ್ಳಿ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕವು 9.52 ಎಂಎಲ್‌ಡಿ ಹಾಗೂ ಚಿಕ್ಕೇಗೌಡನದೊಡ್ಡಿ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕವು 8.90 ಎಂಎಲ್‌ಡಿ ಸಾಮರ್ಥ್ಯ ಹೊಂದಿವೆ. ಇವುಗಳ ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಪೀಠದ ಪರಿಹಾರ ನಿಧಿಯಿಂದ ಸರಕಾರ 30 ಕೋಟಿ ರೂ.ವೆಚ್ಚದಲ್ಲಿ ಘಟಕಗಳ ಉನ್ನತೀಕರಣ ನಡೆಯುತ್ತಿದೆ ಎಂದು ವಿವರಿಸಿದರು.
ಮದ್ದೂರು ನಗರಸಭೆ ವ್ಯಾಪ್ತಿಯ ಚಾಮನಹಳ್ಳಿ ಆಶ್ರಯ ಬಡಾವಣೆಗೆ ತ್ಯಾಜ್ಯ ನೀರು ಸಂಸ್ಕರಣಾ ವಿಕೇಂದ್ರಿಕೃತ ಘಟಕವನ್ನು ಸ್ಥಾಪಿಸಲು ಬಳಸಿದ ನೀರು ನಿರ್ವಹಣೆ ಯೋಜನೆಯಡಿ 115 ಲಕ್ಷ ರೂ ಅನುದಾನ ನಿಗದಿಯಾಗಿರುತ್ತದೆ. ಈಗಾಗಲೇ ಯೋಜನಾ ಸಮಾಲೋಚಕರು ಸ್ಥಳ ಪರಿಶೀಲಿಸಿ ಸರ್ವೇ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿನ್ಯಾಸ ಮತ್ತು ಡಿ.ಪಿ.ಆರ್ ತಯಾರಿಸಿ ಕೆ.ಯು.ಐ.ಡಿ.ಎಫ್.ಸಿ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ ಎಂದರು.
ನಾಗಮಂಗಲ ಪುರಸಭೆ ವ್ಯಾಪ್ತಿಯ ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆಯನ್ನು ಪುನರುಜ್ಜಿವನಗೊಳಿಸಲು, ಕೈಬಿಟ್ಟಿರುವ ಒಳಚರಂಡಿ ಮಾರ್ಗಗಳನ್ನು ಪುನರ್ ಸ್ಥಾಪಿಸುವ ಹಾಗೂ ವೆಟ್‌ವೆಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನಶ್ವೇತನ ಕಾಮಗಾರಿಯನ್ನು ಬಳಸಿದ ನೀರು ನಿರ್ವಹಣೆ ಯೋಜನೆಯಡಿ ಕೈಗೊಳ್ಳಲು 25 ಕೋಟಿ ರೂಗಳ ಡಿ.ಪಿ.ಆರ್ ತಯಾರಿಸಿ ಕೆ.ಯು.ಐ.ಡಿ.ಎಫ್.ಸಿ ಅವರಿಗೆ ಸಲ್ಲಿಸಲಾಗುವುದು. ಬೆಳ್ಳೂರು ಪಟ್ಟಣ ಪಂಚಾಯಿತಿಯ ಕೆ.ಯು.ಐ.ಡಿ.ಎಫ್.ಸಿ ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ ಮತ್ತು ಎಫ್‌ಎಸ್‌ಟಿಅನ್ನು ಕಾರ್ಯಗತಗೊಳಿಸುವ ಬಗ್ಗೆ ಹಿಂದಿನ ಸಭೆಗಳಲ್ಲಿ ನೀಡಲಾದ ಸೂಚನೆಯನ್ನು ಪಾಲಿಸುವಂತೆ ಜಲಶುದ್ದಿ ಅಭಿಯಾನದ ಕಾರ್ಯ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಸೂಚಿಸಿದರು.
ಎಫ್‌ಎಸ್‌ಟಿಗೆ ಸೆಪ್ಟಿಕ್ ಟ್ಯಾಂಕ್‌ಗಳ ತ್ಯಾಜ್ಯ ನೀರನ್ನು ಸಾಗಿಸಲು ಅಗತ್ಯವಿರುವ ಸಕ್ಕಿಂಗ್ ಯಂತ್ರ ಮತ್ತು ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಲು ಮುಖ್ಯ ಅಧಿಕಾರಿ ಪಟ್ಟಣ ಪಂಚಾಯತಿ ಬೆಳ್ಳೂರು ಅಧಿಕಾರಿಗೆ ಸೂಚಿಸಿದ ಡಿಸಿ, ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭವಾಗಬೇಕಿದೆ ಎಂದು ತಿಳಿಸಿದರು.
ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಬಳಸಿದ ನೀರು ನಿರ್ವಹಣೆ ಯೋಜನೆಯಡಿ ಒಳಚರಂಡಿ ವ್ಯವಸ್ಥೆಯ ಮಿಸ್ಸಿಂಗ್ ಲಿಂಕ್‌ಗಳನ್ನು ಪೂರ್ಣಗೊಳಿಸಲು ಹಾಗೂ ವೆಟ್‌ವೆಲ್ ಮತ್ತು ಎಸ್.ಟಿ.ಪಿ.ಗಳನ್ನು ಉನ್ನತೀಕರಿಸಿ ಪೂರ್ಣ ಒಳಚರಂಡಿ ವ್ಯವಸ್ಥೆಯನ್ನು ಪುನಶ್ವೇತನಗೊಳಿಸುವಂತೆ ಕಾಮಗಾರಿ ಮಾಡಲು 711 ಲಕ್ಷ ರೂಗಳ ಡಿ.ಪಿ.ಆರ್ ತಯಾರಿಸಲಾಗಿದೆ. ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಬಳಸಿದ ನೀರು ನಿರ್ವಹಣೆ ಯೋಜನೆಯಡಿ 1,812 ಲಕ್ಷ ರೂಗಳ ಒಳಚರಂಡಿ ಮಿಸ್ಸಿಂಗ್ ಲಿಂಕ್ ಮತ್ತು 4 ವೆಟ್‌ವೆಲ್‌ಗಳ ನಿರ್ಮಾಣಕ್ಕಾಗಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಟೆಂಡರ್ ಕರೆದು ಕನ್ಸ್ಸ್ಟ್ರೇಕ್ಷನ್ ಬೆಂಗಳೂರು ಅವರಿಗೆ ಕಾಮಗಾರಿ ವಹಿಸಲಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್, ಪೌರಾಯುಕ್ತೆ ಯು.ಪಿ.ಪಂಪಶ್ರೀ ಇತರರಿದ್ದರು.