ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಪೊಲೀಸ್ ಇಲಾಖೆ ಸೇರಿದಂತೆ ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಹಮ್ಮಿಕೊಂಡಿದ್ದ ಕುಂದುಕೊರತೆ ಹಾಗೂ ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಸುರೇಶ್ ಬಾಬು ಮಾತನಾಡಿದರು.
ಅಧಿಕಾರಿಗಳಿಗೆ ಲೋಕಾಯುಕ್ತ ಅಧೀಕ್ಷಕ ಸುರೇಶ್ ಬಾಬು ಸೂಚನೆ
ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿ-ಸಿಬ್ಬಂದಿ ನಿಮ್ಮ ವ್ಯಾಪ್ತಿಯ ಕಚೇರಿಗಳಲ್ಲಿನ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ಸಾರ್ವಜನಿಕರನ್ನು ಅಲೆದಾಡಿಸಿ, ಶೋಷಣೆಗೊಳಪಡಿಸದೆ ನಿಮ್ಮ ಹಂತದಲ್ಲೇ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನೆರವಾಗಿ ಎಂದು ಲೋಕಾಯುಕ್ತ ಅಧೀಕ್ಷಕ ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಪೊಲೀಸ್ ಇಲಾಖೆ ಸೇರಿದಂತೆ ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಸೇರಿದಂತೆ ಸಾರ್ವಜನಿಕರೊಂದಿಗೆ ಹಮ್ಮಿಕೊಂಡಿದ್ದ ಕುಂದುಕೊರತೆ ಹಾಗೂ ದೂರು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದಲ್ಲಿ ಸಿಗುವ ಸೇವೆ, ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನ್ಯಾಯಯುತವಾಗಿ ಒದಗಿಸಿದಾಗ ಹಾಗೂ ಕೆಲವೊಂದು ಸಮಸ್ಯೆಗಳು ಉಂಟಾದ ವೇಳೆ ಜನರಿಂದ ಸಮಸ್ಯೆ ಆಲಿಸಿ ಅವರಿಗೆ ನೆರವಾಗುವ ನಡುವಳಿಕೆ ತೋರಿದಾಗ ಸಾಧ್ಯವಾದಷ್ಟು ಸಾರ್ವಜನಿಕ ದೂರು ಮತ್ತು ಆರೋಪಗಳು ಕಡಿಮೆಯಾಗುತ್ತವೆ. ಹೀಗಾಗಿ ಕಾನೂನು ಚೌಕಟ್ಟು ಮತ್ತು ಸರ್ಕಾರಿ ನಿಯಮಗಳ ಜತೆಗೆ ಮಾನವೀಯತೆಯಿಂದಲೂ ನಿಮ್ಮ ಅಧಿಕಾರದ ಆಡಳಿತ ನಿರ್ವಹಿಸಿ ಎಂದರು.
ತಹಸೀಲ್ದಾರ್ ಚೇತನಾ ಯಾದವ್, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಟೌನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಎಡಿಎಲ್‌ಆರ್ ಮೇಘನಾ, ಲೋಕೋಪಯೋಗಿ ಎಇಇ ಜಸ್ವಂತ್ ಪಂಡಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ಇತರರು ಹಾಜರಿದ್ದರು.