ಮದ್ದೂರು ತಾಲೂಕಿನ ಅಂಕೇಗೌಡನದೊಡ್ಡಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಶಾಸಕ ಕೆ.ಎಂ.ಉದಯ್ ಅವರಿಗೆ ಮಹಿಳೆಯರ ಮನವಿ ಮಾಡಿದರು.
ಮದ್ದೂರು : ಕುಡಿಯುವ ನೀರು, ಸರ್ಕಾರಿ ಬಸ್ ಸೇರಿದಂತೆ ಮೂಲ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವಂತೆ ಶಾಸಕ ಕೆ.ಎಂ.ಉದಯ್‌ಗೆ ಮಹಿಳೆಯರು ಮನವಿ ಸಲ್ಲಿಸಿದರು.
ತಾಲೂಕಿನ ಅಂಕೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲು ಆಗಮಿಸಿದ್ದ ವೇಳೆ ಮಹಿಳೆಯರು ಗ್ರಾಮದ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಗ್ರಾಮಕ್ಕೆ ಸರ್ಕಾರಿ ಬಸ್ ಬರುವುದಿಲ್ಲ. ಮನೆ ಬಳಕೆ ಹಾಗೂ ವ್ಯವಸಾಯ ಬಳಕೆಗೋಸ್ಕರ 1 ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಬರುತ್ತಿಲ್ಲ. ಪಂಚಾಯಿತಿಯಿಂದ ಕುಡಿಯಲು ಹಾಗೂ ಮನೆ ಬಳಕೆಗೂ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಬೇಸಿಗೆಗೂ ಮುನ್ನವೇ ಈ ರೀತಿ ತೊಂದರೆಯಾಗುತ್ತಿದ್ದು ನಾವು ಹೇಗೆ ಜೀವನ ಮಾಡುವುದು ಎಂದು ಗ್ರಾಮದ ಮಹಿಳೆಯರು ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಕೆ.ಎಂ. ಉದಯ್, ಮೂರು ತಿಂಗಳಲ್ಲಿ ಬನ್ನಹಳ್ಳಿ ಏತ ನೀರಾವರಿ ಯೋಜನೆ ಅಂತಿಮ ಘಟ್ಟಕ್ಕೆ ತಲುಪುತ್ತದೆ. ಹೀಗಾಗಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಗ್ರಾಮದ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸಿದಾಗ ಬೋರ್‌ವೆಲ್‌ನಲ್ಲಿ ನೀರು ಹರಿಯಲಿದ್ದು, ಆದಷ್ಟು ಬೇಗ ಕುಡಿಯುವ ನೀರು ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.
ಗ್ರಾಮಕ್ಕೆ ಮೂಲ ಸೌಕರ್ಯ ಹಾಗೂ ಸಾರಿಗೆ ಬಸ್ ಸೌಲಭ್ಯಗಳಿಗೆ ಕೆಲ ದಿನಗಳಲ್ಲೇ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.