ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಇಕೋ ಕ್ಲಬ್, ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
- ಪ್ರತಿಯೊಬ್ಬರೂ ಅರಿತು ಪ್ರಕೃತಿ ರಕ್ಷಿಸುವ ಕೆಲಸ ಮಾಡಲಿ
- ಮನ್‌ಮುಲ್ ನಿರ್ದೇಶಕ ಶಿವಕುಮಾರ್ ಸಲಹೆ
ಮೇಲುಕೋಟೆ: ಪರಿಸರ ಇಲ್ಲದಿದ್ದರೆ ಮನುಷ್ಯನಿಗೆ ಉಳಿಗಾಲ ಇಲ್ಲ ಎಂಬುದನ್ನು ಅರಿತು ಪ್ರತಿಯೊಬ್ಬರೂ ಪ್ರಕೃತಿಯನ್ನು ರಕ್ಷಿಸಲು ಕೆಲಸ ಮಾಡಬೇಕು ಎಂದು ಮನ್‌ಮುಲ್ ನಿರ್ದೇಶಕ ಶಿವಕುಮಾರ್ ಹೇಳಿದರು.
ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಇಕೋ ಕ್ಲಬ್, ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರದ ಕಾಳಜಿ ಬಾಲ್ಯದಿಂದಲೇ ಆರಂಭವಾಗಬೇಕು. ಪರಿಸರ ನಾಶದಿಂದ ಹಲವು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಶಾಲೆ, ಮನೆ, ಗ್ರಾಮಗಳ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಸಸಿಗಳನ್ನು ನೆಟ್ಟು ಪೋಷಿಸಬೇಕು. ಜಪಾನ್‌ನಂತ ಮುಂದುವರಿದ ದೇಶಗಳು ದೊಡ್ಡಮಟ್ಟದ ದಾಳಿಗೆ ಒಳಗಾದರೂ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ ಕಾರಣ ಪ್ರಗತಿಯತ್ತ ದಾಪುಗಾಲು ಹಾಕುತ್ತಿವೆ ಎಂದು ತಿಳಿಸಿದರು.
ಪರಿಸರ ತಜ್ಞ ಸಂತೋಷ್ ಕೌಲಗಿ ಮಾತನಾಡಿ, ಮೇಲುಕೋಟೆಯಲ್ಲಿ ಅಂದು ಪರಿಸರ ಉತ್ತಮವಾಗಿದ್ದ ಕಾರಣ ಕೊಳಗಳು ಹಾಗೂ ಕೆರೆಯ ನೀರನ್ನು ನೇರವಾಗಿ ಕುಡಿಯುತ್ತಿದ್ದೆವು. ಇಂದು ಕಲುಷಿತ ಪರಿಸರದಿಂದಾಗಿ ನೀರನ್ನು ಶುದ್ಧೀಕರಿಸಿಯೇ ಕುಡಿಯಬೇಕಾದ ಪರಿಸ್ಥಿತಿಗೆ ತಲುಪಿದ್ದೇವೆ. ಇದು ನಮಗೆ ಎಚ್ಚರಿಕೆಯ ಸಂಕೇತವಾಗಿದ್ದು, ಈಗಿನಿಂದಲೇ ಪರಿಸರ ಸಂರಕ್ಷಣೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಮೇಲುಕೋಟೆಯಲ್ಲಿ ಬಾಲ್ಯದಲ್ಲಿ ಕಾಣುತ್ತಿದ್ದ ಗಿಡ, ಮರ, ಪಕ್ಷಿಗಳ ಪರಿಸರ ಕಡಿಮೆಯಾಗಿದೆ ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ಪರಿಸರ ಸಂರಕ್ಷಣೆಯನ್ನು ಮರೆಯುತ್ತಿದ್ದೇವೆ ಎಲ್ಲೆಡೆ ಹೇರಳವಾಗಿ ಪರಿಸರ ನಾಶವಾಗುತ್ತಿದೆ. ಮೇಲುಕೋಟೆಗೆ ಭಕ್ತಸಾಗರವೇ ಹರಿದು ಬರುತ್ತಿರುವ ಕಾರಣ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು
ಶಾಲಾ ಆವರಣದಲ್ಲಿ ಹೂವಿನ ಸಸಿಗಳನ್ನು ನೆಟ್ಟು ಪರಿಸರ ಪ್ರೇಮದ ಜಾಗೃತಿ ಮೂಡಿಸಿದರು. ಮಕ್ಕಳಿಗೆ ನಂದಿನಿ ಕುಕ್ಕೀಸ್ ವಿತರಿಸಲಾಯಿತು. ಪರಿಸರ ಕಾಳಜಿಯ ಚಿತ್ರ ಬಿಡಿಸಿದ್ದ ಮಕ್ಕಳನ್ನು ಅಭಿನಂದಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಭವಾನಿ ಹರಿಧರ್, ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ವಾದ್ಯಾರ್ ತಿರುಮಲೈ, ಲಕ್ಷ್ಮಮ್ಮ, ಮಣಿಮುರುಗನ್, ಜಿ.ಕೆ.ಕುಮಾರ್, ಪಿಡಿಒ ರಾಜೇಶ್ವರ್, ಕಾಲಭೈರವೇಶ್ವರ ಕಲಾತಂಡದ ಜಯಲಕ್ಷ್ಮೀ ಪುಟ್ಟರಾಜು, ಈಶಮುರಳಿ, ಪುಳಿಯೋಗರೆ ರವಿ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಸಹಶಿಕ್ಷಕರಾದ ಜಯಂತಿ, ಪೂರ್ಣಿಮಾ, ಶ್ರುತಿ, ಚಂದ್ರಿಕಾ, ಮಕ್ಕಳಮನೆ ಶಿಕ್ಷಕಿ ಕವಿತಾ ಇದ್ದರು.