ಮಂಡ್ಯ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತರಾದ ಬೆಂಗಳೂರು ತಂಡಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ ಬಹುಮಾನ ವಿತರಿಸಿದರು. 
ಮಂಡ್ಯ

ವೀಲ್‌ಚೇರ್ ಕ್ರಿಕೆಟ್‌ನಲ್ಲಿ ಬೆಂಗಳೂರು ಚಾಂಪಿಯನ್: ವಿಜಯಪುರ ತಂಡಕ್ಕೆ ದ್ವಿತೀಯ ಬಹುಮಾನ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ
  • ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿ
  • ಬೆಂಗಳೂರು, ವಿಜಯಪುರ, ಮಂಡ್ಯ, ಬಾಗಲಕೋಟೆ ತಂಡ ಭಾಗಿ
ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂಗವಿಕಲರ ವೀಲ್‌ಚೇರ್ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಜಿಲ್ಲಾ ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ, ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್, ರಾಜ್ಯ ದಿವ್ಯಾಂಗ ವೀಲ್ಚೇರ್ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ಟೂರ್ನಿ ಆಯೋಜಿಸಲಾಗಿತ್ತು. 10 ಓವರ್‌ಗಳ ಫೈನಲ್ ಪಂದ್ಯದಲ್ಲಿ ವಿಜಯಪುರ ತಂಡವನ್ನು ಸೋಲಿಸಿ ಬೆಂಗಳೂರು ಪ್ರಥಮ ಸ್ಥಾನ ಪಡೆಯಿತು. ಬಾಗಲಕೋಟೆ ತೃತೀಯ ಹಾಗೂ ಮಂಡ್ಯ ತಂಡ ಸಮಾಧಾನಕರ ಬಹುಮಾನ ಪಡೆದವು. ಒಟ್ಟು ನಾಲ್ಕು ತಂಡ ಟೂರ್ನಿಯಲ್ಲಿ ಪಾಲ್ಗೊಂಡವು.
ವಿಜೇತರಿಗೆ ಬಹುಮಾನ ವಿತರಿಸಿದ ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ ಮಾತನಾಡಿ, ವೀಲ್‌ಚೇರ್‌ನಲ್ಲಿ ಕ್ರಿಕೆಟ್ ಆಡುವುದು ಸವಾಲಿನ ವಿಷಯ. ಮಂಡ್ಯ ಜಿಲ್ಲೆಯಲ್ಲಿಯೇ ವೀಲ್‌ಚೇರ್ ಕ್ರಿಕೆಟ್ ಆಡುತ್ತಿರುವುದು ಇದೇ ಪ್ರಥಮ. ಈ ಟೂರ್ನಿಯನ್ನು ನೋಡಲು ರೋಮಾಂಚನವಾಗುತ್ತದೆ. ಅಂಗವಿಕಲರು ವೀಲ್ ಚೇರ್‌ನಲ್ಲಿ ಕುಳಿತು ಸಾಮಾನ್ಯರಂತಯೇ ಕ್ರಿಕೆಟ್ ಆಡುವುದು ಸವಾಲು ಮತ್ತು ಸಾಮರ್ಥ್ಯ ನೋಡುಗರ ಮನ ಸೆಳೆಯುತ್ತದೆ. ಅಂಗವಿಕಲರ ಕ್ರೀಡೆ ಮತ್ತು ಸಮಾಜಮುಖಿ ಕೆಲಸಗಳಿಗೆ ನಮ್ಮ ಟ್ರಸ್ಟ್ ಸದಾ ಸ್ಪಂದಿಸುತ್ತದೆ. ಉತ್ತಮ ಕ್ರೀಡಾ ಪಟುಗಳು ಮಂಡ್ಯ ನೆಲದಲ್ಲಿ ಸಾಧನೆ ಮಾಡಲಿ, ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಪ್ರತಿಷ್ಠಾನ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಸಮಾಜಸೇವಕ ಎಂ.ಎಸ್.ಮನ್ವಂತ್, ಎಂ.ಜೆ.ರಂಗಸ್ವಾಮಿ, ಶಂಕರೇಗೌಡ, ಸಿದ್ದರೂಢ, ಮಹೇಶ್, ತಿಪ್ಪೇಸ್ವಾಮಿ, ರಾಘವೇಂದ್ರ, ಜಿಲ್ಲಾ ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಬೋರೇಗೌಡ, ಜಿಲ್ಲಾಧ್ಯಕ್ಷ ಎಸ್.ಜಿ.ರಾಘವೇಂದ್ರ, ಕೆ.ಶಿವಲಿಂಗಯ್ಯ, ಸೋಮಶೇಖರ್, ಸಿ.ಕೆ.ಕೃಷ್ಣ, ಮಂಜುನಾಥ್ ಇತರರಿದ್ದರು.