ಶ್ರೀರಂಗಪಟ್ಟಣ ಹೊರವಲಯದ ಪಶ್ಚಿಮವಾಹಿನಿ ಬಳಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯ ಸ್ವಾಸ್ಥ್ಯ ಶಿಬಿರದ ಸಮಾರೋಪ ಸಮಾರಂಭವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಡಾ.ರಾಜಶೇಖರ್ ರೆಡ್ಡಿ ಇತರರು ಇದ್ದರು. 
ಮಂಡ್ಯ

ಆರೋಗ್ಯಕರ ಜೀವನಕ್ಕೆ ಸ್ವಾಸ್ಥ್ಯ ಶಿಬಿರ ಸಹಕಾರಿ

ಶ್ರೀರಂಗಪಟ್ಟಣ: ಮಾನವನ ದಿನಚರಿ, ಆತನ ಮಾನಸಿಕ ಸ್ಥಿತಿ ಹಾಗೂ ದೈಹಿಕ ಹವ್ಯಾಸಗಳು ಹೇಗಿರಬೇಕೆಂಬುವುದನ್ನು ಕಲಿತು ಸಿದ್ಧಿಸಿಕೊಂಡು ಆರೋಗ್ಯಕರ ನಿರ್ವಹಣೆ ನಡೆಸಲು ಸ್ವಾಸ್ಥ್ಯ ಶಿಬಿರದಂತಹ ಕಾರ್ಯಕ್ರಮಗಳ ಅವಶ್ಯಕತೆ ಹಾಗೂ ಆಯೋಜನೆ ಅತ್ಯಗತ್ಯ ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
ಪಟ್ಟಣ ಹೊರವಲಯದ ಪಶ್ಚಿಮವಾಹಿನಿ ಬಳಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯಲ್ಲಿ 3 ದಿನಗಳ ಕಾಲ ನಡೆದ ಸ್ವಾಸ್ಥ್ಯ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರ ಪ್ರಾರಂಭದ ದಿನದಿಂದ ಇಲ್ಲಿಯವರೆಗೂ ಅರ್ಥಪೂರ್ಣವಾಗಿ ಜರುಗಿರುವುದು ಇಲ್ಲಿನ ನೆರೆದ ಹಲವು ಜನರ ಮುಖದಲ್ಲಿನ ಕಾಂತಿಯಿಂದ ತಿಳಿದು ಬಂದಿದೆ. ಒತ್ತಡದ ಜೀವನ ನಿರ್ವಹಿಸುತ್ತಿರುವ ಎಷ್ಟೋ ಜನರಿಗೆ ಮನಸ್ಸಿನಲ್ಲಿ ಪ್ರಶಾಂತತೆ ಹಾಗೂ ಸಂಯಮದ ಜೀವನ ನಿರ್ವಹಿಸಲು ದೈಹಿಕ ಹವ್ಯಾಸಗಳು ಹೇಗಿರಬೇಕೆಂಬುವುದನ್ನು ಕಲಿಸಲು ಈ ಶಿಬಿರವು ಪೂರಕವಾಗಿದೆ. ಮುಂದಿನ ದಿನಮಾನಗಳಲ್ಲಿ ಇದರ ಪ್ರಯೋಜನವನ್ನು ಇನ್ನಷ್ಟು ಜನರು ಪಡೆದುಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಚಂದ್ರವನ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮೀಜಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಜನರು ಸಂಪತ್ತಿನ ಹಿಂದೆ ಓಡುತ್ತಿದ್ದಾರೆಯೇ ವಿನಃ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನೇ ಮರೆತಿದ್ದಾರೆ. ಸಮಾಜದಲ್ಲಿರುವಂತಹ ಜನರಿಗಾಗಿ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯ ವತಿಯಿಂದ ಈ ಶಿಬಿರನವನ್ನು ಆಯೋಜಿಸಲಾಗಿದೆ. ನಮ್ಮ ಸನಾತನ ಧರ್ಮದಿಂದ ಬಂದಂತಹ ಆಯುರ್ವೇದ, ಆಧ್ಯಾತ್ಮ ಹಾಗೂ ಯೋಗದ ಮೂಲಕ ಮನುಷ್ಯನನ್ನು ಉತ್ತಮ ಮಾರ್ಗದಲ್ಲಿ ಪರಿವರ್ತನೆ ಮಾಡುವುದೇ ನಮ್ಮ ಉದ್ದೇಶ ಮತ್ತು ಗುರಿಯಾಗಿದೆ. ಈ ಶಿಬಿರಕ್ಕೆ ಆಗಮಿಸಿದ ಶಿಬಿರಾರ್ಥಿಗಳು ನಿಜಕ್ಕೂ ಧನ್ಯರು ಎಂದರು.
ಬೆಂಗಳೂರಿನ ನರರೋಗ ತಜ್ಞ ಡಾ.ರಾಜಶೇಖರ್ ರೆಡ್ಡಿ ಮಾತನಾಡಿ, ಸಾಮಾನ್ಯ ಮನುಷ್ಯರು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಅಲ್ಲಿ ಸಾವಿರಾರು ಹಣವನ್ನು ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಮ್ಮ ಆರೋಗ್ಯವನ್ನು ಪಂಚಭೂತಗಳಲ್ಲೇ ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ಕಲಿಸಿಕೊಡುವ ಪ್ರಯತ್ನವನ್ನು ಈ ಶಿಬಿರದಲ್ಲಿ ಮಾಡಿದ್ದೇವೆ. ನಮ್ಮ ದಿನನಿತ್ಯದ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರಗಳಿರುತ್ತವೆ. ಅದನ್ನು ತಿಳಿಸಿಕೊಡಲು ಈ ಸ್ವಾಸ್ಥ್ಯ ಶಿಬಿರವು ಪೂರಕವಾಗಿದೆ ಎಂದು ಶಿಬಿರಾರ್ಥಿಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ರಾಜೀವ್, ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ ಹಾಗೂ ಯೋಗ ಥೆರಪಿಸ್ಟ್ ವಿನಯ್, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಉಪಸ್ಥಿತರಿದ್ದರು.