ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್ ಲೈನ್ಸ್ ಕಾಲೇಜಿನ ವತಿಯಿಂದ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕೆ.ಎಂ.ದೊಡ್ಡಿ: ತಪ್ಪುಗಳು ನಡೆದಾಗ, ವಿಷಯಗಳು ಅರ್ಥವಾಗದಿದ್ದಾಗ ಪ್ರಶ್ನೆ ಕೇಳುವುದನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಸಂಶೋಧಕ ಹುಲಿಕಲ್ ನಟರಾಜು ಸಲಹೆ ನೀಡಿದರು.
ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್ ಲೈನ್ಸ್ ಕಾಲೇಜಿನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಷಯಗಳನ್ನು ಕೇಳಿ ಪಡೆದು ಅದನ್ನು ಹಿರಿಯರಿಗೂ ಹೇಳಿಕೊಡಬೇಕು. ಆಗ ಮಾತ್ರ ಸಮಾಜ ಉದ್ಧಾರವಾಗುತ್ತದೆ ಎಂದರು.
ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿರುವ ಹೆಣ್ಣು ಮಕ್ಕಳು ಸಂಶೋಧನೆಯಲ್ಲಿ ಮಾತ್ರ ಹಿಂದುಳಿದಿದ್ದಾರೆ. ಹೆಣ್ಣು ಮಕ್ಕಳು ಸಂಶೋಧನೆ ಕ್ಷೇತ್ರದಲ್ಲಿ ತೊಡಗಬೇಕು. ನೆನ್ನೆ ಇದ್ದ ಟೆಕ್ನಾಲಾಜಿ ಇವತ್ತಿಲ್ಲ. ಎಲ್ಲ ಟೆಕ್ನಾಲಜಿಗಳು ಕಾಲಕ್ಕೆ ತಕ್ಕ ಹಾಗೇ ಅಪ್ಡೇಟ್ ಆಗುತ್ತಿವೆ. ಇಂದು ನಾವೆಲ್ಲ ಮೊಬೈಲ್ ದಾಸರಾಗಿದ್ದೀವಿ. ಹೀಗಾಗಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷವಾಕ್ಯ ಪಾಲಿಸಬೇಕು. ಎಐ ಟೆಕ್ನಾಲಜಿ ಬಂದು ನಮ್ಮೆಲ್ಲರನ್ನೂ ಬೆತ್ತಲಗೊಳಿಸುತ್ತಿದೆ. ಟೆಕ್ನಾಲಜಿಗಳಿಂದ ತೊಂದರೆಗಳಾಗಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಊಟದ ಮೇಲೆ ನಿಗಾ ಇರದಷ್ಟು ಮೊಬೈಲ್ ದಾಸರಾಗಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲ ಪಂಚಾಗಕ್ಕಿಂತ ಸಂಬಂಧಗಳಿಗೆ ಬೆಲೆಕೊಡಬೇಕು. ಮನಸ್ಸಿನ ಕಡೆ ಗಮನಕೊಟ್ಟರೆ ಸದೃಢವಾಗಿರುತ್ತದೆ. ದೈವ, ದೆವ್ವವನ್ನು ಯಾರೂ ಇದುವರೆಗೂ ನೋಡಿಲ್ಲ. ಆದರೂ ಈ ಯುಗದಲ್ಲೂ ಮೌಢ್ಯಗಳ ದಾಸರಾಗುತ್ತಿದ್ದಾರೆ. ವಿಜ್ಞಾನ ಇಷ್ಟು ಮುಂದುವರಿದರೂ ಜನ ಮೌಢ್ಯವನ್ನು ಇನ್ನೂ ನಂಬುತ್ತಿದ್ದಾರೆ. ಎಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬುವುದೇ ಅರ್ಥವಾಗುತ್ತಿಲ್ಲ. ಪ್ರತಿಯೊಬ್ಬರೂ ವಿದ್ಯಾವಂತ, ಬುದ್ದಿವಂತ ಹಾಗೂ ಪ್ರಜ್ಞಾವಂತರಾಗಬೇಕು. ಯಾವುದೇ ದೇವರು ಯಾರ ಹಣೆಬರಹವನ್ನೂ ಬರೆಯಲ್ಲ. ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳಬೇಕು ಎಂದು ಹೇಳಿದರು.
ಮನಸ್ಸು ಮಾಡಿದರೆ ಜಗತ್ತನ್ನೇ ಗೆಲ್ಲಬಹುದು. ಕಚ್ಚೆ, ಬಾಯಿ ಶುದ್ಧವಾಗಿದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ಮಾನವೀಯ ಮೌಲ್ಯಗಳನ್ನು ಬದಿಗೊತ್ತಿ ಬದುಕಬಾರದು. ದೇವರಿಗೂ ಮೋಸ ಮಾಡುವ ವ್ಯಕ್ತಿ ಮನುಷ್ಯ ಮಾತ್ರ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ವಿ ಮಲ್ಲಿಕಾರ್ಜುನ ಮಾತನಾಡಿ, ಮೂಢ ನಂಬಿಕೆಗಳಿಂದ ಸಮಾಜ ತನ್ನ ದಿಕ್ಕನ್ನೇ ಬದಲಾಯಿಸುತ್ತಿದೆ. ಇದು ಯುವ ಜನತೆಯ ಮೇಲೆ ಪ್ರಭಾವ ಬೀಳಲಿದ್ದು, ಮೂಢ ನಂಬಿಕೆಗಳಿಗೆ ಆಸ್ಪದ ನೀಡದೆ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಇದೇ ವೇಳೆ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿಭಾಗದ ಮುಖ್ಯಸ್ಥರಾದ ಪುಷ್ಪಾ, ಎಂ.ಎಸ್.ಪುಟ್ಟಸ್ವಾಮಿ, ಉಪನ್ಯಾಸಕಿಯರಾದ ಅನಿತಾ, ಅಶ್ವಿನಿ, ವಿನೋದ, ಅನುರಾಧ, ಗಂಗಯ್ಯ ಇತರರು ಇದ್ದರು.