ಪಾಂಡವಪುರ ತಾಲೂಕಿನ ಡಿಂಕಾ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು. ವೈ.ಪಿ.ಮಂಜುನಾಥ್, ವೈ.ಜಿ.ರಘು, ಡಿಂಕಾ ರಮೇಶ್, ಸೋಮಣ್ಣ, ತಮ್ಮಯ್ಯ, ಡಿಂಕಾ ಶೆಟ್ಟಹಳ್ಳಿ ದೇವರಾಜು, ಅಭಿಲಾಷ್ ಇತರರು ಇದ್ದರು.
ಮಲ್ಲಿಗೆರೆ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇಷ್ಟರಲ್ಲಿಯೇ ಈ ಯೋಜನೆಯಿಂದ ಕೆಆರ್‌ಎಸ್ ಹಿನ್ನೀರು ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ತಾಲೂಕಿನ ಡಿಂಕಾ ಪಂಚಾಯಿತಿ ಹಲವು ಗ್ರಾಮಗಳಿಗೆ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
2017-18ರಲ್ಲಿ ಮಲ್ಲಿಗೆರೆ ಏತನೀರಾವರಿ ಯೋಜನೆ ಅನುಷ್ಠಾನದ ಪ್ರಕ್ರಿಯೆ ಪ್ರಾರಂಭವಾಗಿ ಸರ್ಕಾರವು ಸುಮಾರು 22 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಮುಗಿದಿರಲಿಲ್ಲ. ಬಳಿಕ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಯೋಜನೆಯ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಂಡ ವೇಳೆ ಇದು ಅರಣ್ಯ ಪ್ರದೇಶವಾಗಿದ್ದರಿಂದ ಆ ಇಲಾಖೆಯವರು ಅನುಮತಿ ನೀಡಿರಲಿಲ್ಲ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ 3 ವರ್ಷಗಳಿಂದಲೂ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಮತ್ತು ಚರ್ಚೆ ನಡೆಸಿ ಅನುಮತಿ ಕೋರಲಾಗಿತ್ತು. ಈಗ ಅರಣ್ಯ ಇಲಾಖೆಯವರು ಅನುಮತಿ ನೀಡಿದ್ದರಿಂದ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಮುಗಿದ ಕೂಡಲೇ ಈ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಮೂಲಸೌಲಭ್ಯ ಒದಗಿಸಬೇಕೆನ್ನುವ ದೃಷ್ಟಿಯಿಂದ ಪಂಚಾಯಿತಿ ಮಟ್ಟದ ಗ್ರಾಮಗಳ ರಸ್ತೆ ಮತ್ತು ಚರಂಡಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗ ಡಿಂಕಾ ಗ್ರಾಮದಲ್ಲಿ 77 ಲಕ್ಷ ರೂ. ವಳಲೇಕಟ್ಟೆ ಕೊಪ್ಪಲು ಗ್ರಾಮದಲ್ಲಿ 8 ಲಕ್ಷ ರೂ., ಡಿಂಕಾ ಶೆಟ್ಟಹಳ್ಳಿ ಗ್ರಾಮದಲ್ಲಿ 60 ಲಕ್ಷ ರೂ., ಹೊಸಸಾಯಪನಹಳ್ಳಿ ಗ್ರಾಮದಲ್ಲಿ 33ಲಕ್ಷ ರೂ.ಹಾಗೂ ಮಲ್ಲಿಗೆರೆ ಗ್ರಾಮದಲ್ಲಿ 22 ಲಕ್ಷ ರೂ.ಅಂದಾಜು ವೆಚ್ಚಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ವೈ.ಪಿ.ಮಂಜುನಾಥ್, ಉಪಾಧ್ಯಕ್ಷ ವೈ.ಜಿ.ರಘು, ಮುಖಂಡರಾದ ಡಿಂಕಾ ರಮೇಶ್, ಸೋಮಣ್ಣ, ತಮ್ಮಯ್ಯ, ಡಿಂಕಾ ಶೆಟ್ಟಹಳ್ಳಿ ದೇವರಾಜು, ಅಭಿಲಾಷ್, ರಾಜೇಶ್ ಮಲ್ಲಿಗೆರೆ, ವಳಲೇಕಟ್ಟೆಕೊಪ್ಪಲು ಜವರೇಗೌಡ ಇತರರು ಇದ್ದರು.