ಮದ್ದೂರಿನ ಪ್ರವಾಸಿಮಂದಿರ ಬಳಿ ಕಾವೇರಿ ನೀರಾವರಿ ನಿಗಮದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು. ಕಂಠಿ ಸುರೇಶ್, ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನ ಕುಮಾರ್, ಬಸವರಾಜು, ವನಿತಾ, ರಾಮಕೃಷ್ಣ ಇದ್ದರು. 
ಮಂಡ್ಯ

ಕೆಆರ್‌ಎಸ್ ಭರ್ತಿಯಾದ ಬಳಿಕ ನಾಲೆಗಳಿಗೆ ನೀರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ
ಮದ್ದೂರು: ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದ್ದು ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ನಾಲೆಗಳ ಮೂಲಕ ನೀರು ಹರಿಸಲಾಗುವುದು. ಹಾಗಾಗಿ ರೈತರು ಸರ್ಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
ನಗರದ ಪ್ರವಾಸಿಮಂದಿರದ ಬಳಿ ಶುಕ್ರವಾರ ಕಾವೇರಿ ನೀರಾವರಿ ನಿಗಮದ ನೂತನ ಕಟಡ ನಿರ್ಮಾಣಕ್ಕೆ 5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ನಡೆದ ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ಸ್ಥಿತಿಗತಿಗಳ ಪರಿಶೀಲನಾ ಸಭೆಯಲ್ಲಿ ರೈತರ ಹಲವು ಸಮಸ್ಯೆಗಳ ಬಗ್ಗೆ ಜಲಸಂಪನ್ಮೂಲ ಸಚಿವರೊಟ್ಟಿಗೆ ಚರ್ಚಿಸಿದ್ದು, ನಾಲೆಗಳ ಮೂಲಕ ನೀರು ಹರಿಸುವುದಾದರೆ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ. ತಾತ್ಕಾಲಿಕವಾಗಿ ನೀರು ಹರಿಸಿದರೆ ಕೆರೆ-ಕಟ್ಟೆ, ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದರು.
ನಗರದ ಎಲಿವೇಟೆಡ್ ಮತ್ತು ಸರ್ವೀಸ್ ರಸ್ತೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಪ್ರಯಾಣಿಕರು ಹೆದ್ದಾರಿಯಲ್ಲಿ ಸಂಚರಿಸಲು ಭಯಭೀತರಾಗಿದ್ದಾರೆ. ಹೆದ್ದಾರಿ ಗಸ್ತು ವಾಹನಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಉದಯ್, ಈ ಸಂಬಂಧ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರಾಜೀವ, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಮಾಜಿ ಸದಸ್ಯರಾದ ಬಸವರಾಜು, ವನಿತಾ, ಶಾಂತಮ್ಮ, ವೆಂಕಟೇಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಎಂ.ಡಿ.ಮಹಾಲಿಂಗಯ್ಯ, ಮಹದೇವು, ಇಂತಿಯಾಜ್, ಕುಶಾಲ್ ಗೌಡ, ಇಂತಿಯಾಜ್ ಉಲ್ಲಾಖಾನ್ ಇತರರು ಇದ್ದರು.