ನೀರಾವರಿ ಸಲಹಾ ಸಮಿತಿ ಸದಸ್ಯ ನಂಜೇಗೌಡ ಆಗ್ರಹ
ಕೆ.ಎಂ.ದೊಡ್ಡಿ : ಕೆಆರ್‌ಎಸ್ ಕಡೆಯ ಭಾಗದ ಹೆಬ್ಬಾಕವಾಡಿ ನಾಲೆಗಳ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಸಮರ್ಪಕವಾಗಿ ನೀರನ್ನು ಹರಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷೃ ಖಂಡನೀಯ ಎಂದು ಕೆಆರ್‌ಎಸ್ ನೀರು ಬಳೆಕೆದಾರರ ಮಹಾಮಂಡಳಿ ನಿರ್ದೇಶಕ, ಕಾವೇರಿ ನೀರಾವರಿ ಸಲಹಾ ಸಮಿತಿ ಸದಸ್ಯ ಬಿ.ಎಂ ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಮಣಿಗೆರೆ, ಅಣ್ಣೂರು, ಮೆಣಸಗೆರೆ, ಬೊಪ್ಪಸಮುದ್ರ, ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಬೆಳೆಗಳಿಗೆ ನೀರಿಲ್ಲದೆ ಕಬ್ಬಿನ ಬೆಳೆ ಒಣಗುವ ಭೀತಿ ಎದುರಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀರು ಕೊಡದೇ ರೈತರ ಬೆಳೆಗಳನ್ನು ನಾಶ ಮಾಡಲು ಹೊರಟಿದ್ದಾರೆಂದು
ಬುಧವಾರ ಸುದ್ದಿ ಗೋಷ್ಠಿಯಲ್ಲಿ ಕಿಡಿಕಾರಿದರು.
ಈ ಹಿಂದಿನ ಕಾವೇರಿ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಕೊಡುವುದಾಗಿ ಅಧಿಕಾರಿಗಳು ಒಪ್ಪಿದ್ದರು. ಈಗ ನೀರು ನೀಡದಿದ್ದರೆ
ರೈತರ ಪಾಡೇನು ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಘುರಾಮ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಳವಳ್ಳಿ ತಾಲೂಕಿನ ಕಡೆಯ ಭಾಗದ ಹೆಬ್ಬಾಕ ವಾಡಿಯ ಕೆಲವು ಶಾಖಾ ನಾಲೆಗೆ ಮಾತ್ರ ನೀರು ಹರಿಸಿದ್ದಾರೆ. ಮದ್ದೂರು ತಾಲೂಕಿನ ಕಡೆಯ ಭಾಗದ ರೈತರಿಗೆ ನಿಗಮದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದರು.
ಕಳೆದ ಎರಡು, ಮೂರು ವರ್ಷಗಳಿಂದ ನೀರಿನ ಅಭಾವ ಎದುರಾಗಿದೆ. ವ್ಯವಸಾಯವನ್ನೇ
ಮಾಡದ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಕನ್ನಂಬಾಡಿ ಕಟ್ಟೆಯಲ್ಲಿ ನೀರು
ಹಲವು ಬಾರಿ ತುಂಬಿದೆ. ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಸಾವಿರಾರು ಎಕರೆಯಲ್ಲಿ
ರೈತರು ಬೆಳೆದಿದ್ದಾರೆ. ಈಗಲಾದರೂ ನೀರು ಕೊಡದಿದ್ದರೆ ಕೋಟ್ಯಂತರ ರೂ. ನಷ್ಟವನ್ನು ರೈತರು ಅನುಭವಿಸಬೇಕಾಗುತ್ತದೆ ಎಂದು ಬಿ.ಎಂ. ನಂಜೇಗೌಡ ಅಳಲು ತೋಡಿಕೊಂಡರು.
ಹಿಂದಿನ ಸಭೆಯ ತೀರ್ಮಾನದಂತೆ ಕಟ್ಟು ಪದ್ಧತಿಯಲ್ಲಾದರೂ ನೀರನ್ನು ಕೊಟ್ಟು ರೈತರ ಬೆಳೆಗಳನ್ನು ಉಳಿಸಬೇಕು. ಅಧಿಕಾರಿಗಳು ಮಾತಿಗೆ ತಪ್ಪಿದರೆ ಈ ವ್ಯಾಪ್ತಿಯ ರೈತರ ಜತೆಗೂಡಿ ಹೋರಾಟ ರೂಪಿಸಲಾಗುವುದು ಎಂದು ಬಿ.ಎಂ. ನಂಜೇಗೌಡ ಎಚ್ಚರಿಸಿದರು.