ಮಳವಳ್ಳಿ ಪಟ್ಟಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು.  
ಮಂಡ್ಯ

ಕೆಆರ್‌ಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಕ್ಸಮರ

ಲೋಕೇಶ್ ಮನು. ಡಿ
ಮಳವಳ್ಳಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವಿರುದ್ಧ ಸುಳ್ಳು ದೂರು ದಾಖಲು ಮಾಡಿದ್ದಾರೆಂದು ಆರೋಪಿಸಿ ಹಾಗೂ ಅಧಿಕಾರಿಗಳ ದುರಾಡಳಿತ ವಿರೋಧಿಸಿ ಗುರುವಾರ ಪಕ್ಷದಿಂದ ಕರೆ ನೀಡಿದ್ದ ಮಳವಳ್ಳಿ ಚಲೋ ವೇಳೆ ಕೆಆರ್‌ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ ಏರ್ಪಟ್ಟು ಪೊಲೀಸರು ಕೆಆರ್‌ಎಸ್ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪಕ್ಷದ ಕಾರ್ಯಕರ್ತರ ವಿರುದ್ಧ ದೂರು ನೀಡಿರುವುದನ್ನು ವಿರೋಧಿಸಿ ಕೆಆರ್‌ಸ್ ಪಕ್ಷ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅದರಂತೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎನ್.ದೀಪಕ್, ಕಾರ್ಯಾಧ್ಯಕ್ಷ ರಘು ಜಾಣಗೆರೆ, ಕಾರ್ಯದರ್ಶಿ ರಮೇಶ್‌ಗೌಡ, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಜಿಲ್ಲಾಧ್ಯಕ್ಷ ಮಲ್ಲೇಶ್ ಸೇರಿದಂತೆ ಹಲವರ ನೇತೃತ್ವದಲ್ಲಿ ಕಾರ್ಯಕರ್ತರು ಚಲೋ ಆರಂಭಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಬಳಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರನ್ನು ಗೇಟ್ ಸಮೀಪ ಪೊಲೀಸರು ತಡೆದರು. ಈ ವೇಳೆ ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾವಚಿತ್ರವನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾಗುತ್ತಿದ್ದಂತೆಯೇ ಪೊಲೀಸರು 20ಕ್ಕೂ ಕಾರ್ಯಕರ್ತರನ್ನು ಬಂಧಿಸಿ ಕಿರುಗಾವಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.
ರಾಜ್ಯಾಧ್ಯಕ್ಷ ಸಿ.ಎನ್.ದೀಪಕ್ ಮಾತನಾಡಿ, ನಾವು ಶಾಂತಯುತವಾಗಿ ಹೋರಾಟ ಮಾಡಲು ಮುಂದಾಗಿದ್ದವು. ಆದರೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ದೌರ್ಜನ್ಯ ನಡೆಸಿ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಇಂಥ ಬೆದರಿಕೆ ಹೆದರುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಕಿಡಿ ಕಾರಿದರು.
ಅಧಿಕಾರಿಗಳ ತೇಜೋವಧೆ ಸಲ್ಲ: ಕೆಆರ್‌ಎಸ್ ಹೋರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಈ ವಿಚಾರದಲ್ಲಿ ಅನಗತ್ಯವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ, ಬಂದಿರುವವರು ಬಹುತೇಕ ಜನ ಹೊರಗಡೆಯವರು. ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅರಿವಿಲ್ಲದೆ ಅನಗತ್ಯವಾಗಿ ಕೆಲ ಸರ್ಕಾರಿ ಕಚೇರಿಗಳಿಗೆ ಹೋಗಿ ವಿಡಿಯೋ ಮಾಡುತ್ತಾ ಅಧಿಕಾರಿಗಳನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.