ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಕರಪತ್ರ ಬಿಡುಗಡೆ ಮಾಡಲಾಯಿತು. 
ಮಂಡ್ಯ

ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸೋಣ: ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ಕರೆ

ಪ್ರಮುಖ ಮುಖ್ಯಾಂಶಗಳು

  • ಬೂತ್‌ಮಟ್ಟದ ಏಜೆಂಟ್‌ಗಳಿಗೆ ಕಾರ್ಯಾಗಾರ
  • ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಆಯೋಜನೆ
ಮಂಡ್ಯ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಮನ್‌ಮುಲ್ ಮಾಜಿ ಅಧ್ಯಕ್ಷರೂ ಆದ ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಬಿ.ಆರ್.ರಾಮಚಂದ್ರ ಕರೆ ನೀಡಿದರು.
ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಏಜೆಂಟ್‌ಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರಿಗಾಗಿ ನಡೆಯುತ್ತದೆ. ಆದ್ದರಿಂದ ಸಣ್ಣಪುಟ್ಟ ತಪ್ಪುಗಳಿದ್ದರೆ ಸರಿಪಡಿಸಿಕೊಂಡು ಜೆಡಿಎಸ್ ಪಕ್ಷದಿಂದ ಯಾರೇ ಅಭ್ಯರ್ಥಿಗಳಾದರೂ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್‌ಗಳಲ್ಲಿ ಮತಪಟ್ಟಿ ಪರಿಷ್ಕರಣೆಯನ್ನು ಮಾಡುವ ಕೆಲಸವನ್ನು ಮಾಡಬೇಕು. ಕ್ಷೇತ್ರದ ಪ್ರತಿ ಬೂತ್‌ಗಳಲ್ಲಿ ಬಿಎಲ್‌ಎಗಳು ಪರಿಷ್ಕರಣೆಗಾಗಿ ಹೋದಾಗ ಜೆಡಿಎಸ್ ಕಾರ್ಯ ಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತಪಟ್ಟವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು. ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದರೆ ಅಂತಹವರ ಹೆಸರನ್ನು ತೆಗೆಸಿಹಾಕುವ ಕೆಲಸ ಮಾಡಬೇಕು. 18 ವರ್ಷ ತುಂಬಿದವರನ್ನು ಹೊಸ ಮತದಾರರ ಪಟ್ಟಿಗೆ ಸೇರಿಸಬೇಕು. ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅರ್ಹ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವುದು ಪ್ರತಿ ಬೂತ್ ಏಜೆಂಟ್‌ನ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಮಪರ್ಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ ಸದಸ್ಯತ್ವ ನೋಂದಣಿಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆದಾಗ 8,000 ಸದಸ್ಯತ್ವ ದಾಟಿತ್ತು. ಆದರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ 20,000 ಸದಸ್ಯತ್ವ ಮಾಡಿದ್ದಾರೆ. ಆದ್ದರಿಂದ ಮುಂದಿನ ಯುಗಾದಿಯೊಳಗೆ ಮಂಡ್ಯ ಕ್ಷೇತ್ರದಲ್ಲಿ 20 ಸಾವಿರ ಜೆಡಿಎಸ್ ಸದಸ್ಯತ್ವವನ್ನು ಮಾಡಬೇಕು ಎಂದು ಹೇಳಿದರು.
ಪ್ರತಿ ಬೂತ್ ಸಮಿತಿಯಲ್ಲಿ ಎಲ್ಲ ಸಮುದಾಯದವರು ಇರಬೇಕು. ಆ ರೀತಿಯಾಗಿ ಬೂತ್ ಸಮಿತಿ ರಚನೆ ಮಾಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 15 ರಿಂದ 20 ಜನ ಜೆಡಿಎಸ್ ಅಭ್ಯರ್ಥಿಗಳು ಎರಡು ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ಈ ಹಿನ್ನೆಲೆಯಲ್ಲಿ ಬೂತ್ ಸಮಿತಿಗಳನ್ನು ರಚನೆ ಮಾಡಿಕೊಂಡು ಜೆಡಿಎಸ್ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಉಪನ್ಯಾಸ ನೀಡಿದರು. ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷರಾದ ನಾಗೇಶ್, ನಾಗಮ್ಮ, ಮಾಜಿ ಸದಸ್ಯರಾದ ಮಧುಶ್ರೀ, ಪದ್ಮಾವತಿ, ಶಿವರತ್ನಾ, ಜಯಶೀಲಮ್ಮ, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ, ನವೀನ್‌ಕುಮಾರ್, ಬೋರೇಗೌಡ ಇತರರಿದ್ದರು.